ಹಾವೇರಿ: ಸರ್ಕಾರದ ವಿವಿಧ ಸೌಲಭ್ಯಗಳು, ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಗ್ರಾಹಕರ ಜಾಗೃತಿ ಮೇಳ ಕಾರ್ಯಕ್ರಮವನ್ನು ಅ. 22 ರಂದು ಹಾವೇರಿ ನಗರದಲ್ಲಿ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಕಾರ್ಪೊರೇಷನ್ ಬ್ಯಾಂಕ್ ಮ್ಯಾನೇಜರ್ ಪ್ರಭು ಅವರು ತಿಳಿಸಿದರು.
ನಗರದ ವಾರ್ತಾ ಭವನದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರ ಮೇಳವು ಮೂರು ಹಂತಗಳಲ್ಲಿ ನಡೆಯಲಿದೆ. ಅ. 21 ರಿಂದ 25ರವರೆಗೆ 200 ಸರಕಾರಿ ಬ್ಯಾಂಕ್ ಶಾಖೆಗಳಲ್ಲಿ ಜರುಗಲಿದೆ. ಜಿಲ್ಲೆಯಲ್ಲಿ ಕಾರ್ಪೋರೇಶನ್ ಬ್ಯಾಂಕ್ ವತಿಯಿಂದ ಗ್ರಾಹಕರ ಜಾಗೃತಿ ಮೇಳ ಹಾವೇರಿಯಲ್ಲಿ ಅ. 22ರಂದು ನಗರದ ರಜನಿ ಕನ್ವೆಷನ್ ಹಾಲ್ನಲ್ಲಿ ಆಯೋಜಿಸಲಾಗಿದೆ. 22ರ ನಂತರ ಒಂದು ವಾರಕಾಲ ಆಯಾ ಬ್ಯಾಂಕ್ ಶಾಖೆಗಳಲ್ಲಿ ಜರುಗಲಿದೆ ಎಂದು ತಿಳಿಸಿದರು.
ಮೇಳದಲ್ಲಿ ಹಣಕಾಸು ಸೌಲಭ್ಯ, ಜನ-ಧನಯೋಜನೆ, ಕೃಷಿಸಾಲ, ಸ್ಟ್ಯಾಂಡಪ್ ಇಂಡಿಯಾ, ಮುದ್ರಾ ಯೋಜನೆ, ಶಿಕ್ಷಣ ಸಾಲ ಸೇರಿದಂತೆ ವಿವಿಧ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರಿಗೆ ಈ ಕುರಿತ ಮಾಹಿತಿ ಗೊತ್ತಿರುವುದಿಲ್ಲ. ಆದ್ದರಿಂದ ಗ್ರಾಹಕರ ಜಾಗೃತಿ ಮೇಳ ಆಯೋಜಿಸಿದಾಗ ಅವರಿಗೂ ಯೋಜನೆಗಳ ಬಗ್ಗೆ ಅರಿವು ಮೂಡುತ್ತದೆ ಹಾಗೂ ಇವುಗಳ ಸದುಪಯೋಗಪಡಿಸಿಕೊಳ್ಳಲು ಸುಲಭವಾಗುತ್ತದೆ. ಬ್ಯಾಂಕಿನಲ್ಲಿ ಅವಶ್ಯಕತೆ ಇರುವುದರ ಬಗ್ಗೆ ಮಾಹಿತಿ ಸಿಗುತ್ತದೆ. ಈ ಮೇಳದಲ್ಲಿ ಭಾಗವಹಿಸಿದಾಗ ಎಲ್ಲ ತರಹದ ಯೋಜನೆಗಳ ಮಾಹಿತಿ ತಿಳಿಯುತ್ತದೆ ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಅವರು ಮಾತನಾಡಿ, ಸರ್ಕಾರದ ಯೋಜನೆಗಳು, ಸಾಲ ಸೌಲಭ್ಯ, ಗೃಹಸಾಲ, ರೈತ ಸಾಲ, ಶಿಕ್ಷಣ ಸಾಲ, ವಾಹನ ಸಾಲ ಸೇರಿದಂತೆ ವಿವಿಧ ಸಾಲ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶ ಒಳಗೊಂಡಿದೆ. 12 ಬ್ಯಾಂಕ್ಗಳು ಮಳಿಗೆ ಸ್ಥಾಪಿಸಿ ಜಾಗೃತಿ ಮೂಡಿಸಲಾಗುತ್ತದೆ. ಮೇಳದಲ್ಲಿ ಗ್ರಾಮೀಣ ಬ್ಯಾಂಕಿನವರು ಕೂಡಾ ಭಾಗವಹಿಸುತ್ತಾರೆ. ಅ. 22 ರ ನಂತರ ಆಯಾ ಬ್ಯಾಂಕ್ ಶಾಖೆಗಳಲ್ಲಿ ಒಂದು ವಾರದವರೆಗೆ ಗ್ರಾಹಕರ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಗವಿಸಿದ್ಧಪ್ಪ ಬೆಲ್ಲದ ಉದ್ಘಾಟಿಸಲಿದ್ದು, ಬ್ಯಾಂಕ್ ಆಫ್ ಬರೋಡಾದ ರವಿ ಪಾಟೀಲ, ನವಿನಕುಮಾರ ಹಾಗೂ ಪ್ರಾದೇಶಿಕ ಬ್ಯಾಂಕಿನ ಮ್ಯಾನೇಜರ್ಗಳು ಭಾಗವಹಿಸಲಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಹಾವೇರಿ ಕಾರ್ಪೊರೇಷನ್ ಬ್ಯಾಂಕಿನ ಚೀಪ್ ಮ್ಯಾನೇಜರ್ ರಾಮಕೃಷ್ಣ ಇತರರು ಉಪಸ್ಥಿತರಿದ್ದರು.