ಶೀಘ್ರದಲ್ಲೇ ಸದಾಶಿವ ಮುತ್ತ್ಯಾನ ಮಠ ನಿರ್ಮಾಣ

ಶೀಘ್ರದಲ್ಲೇ ಸದಾಶಿವ ಮುತ್ತ್ಯಾನ ಮಠ ನಿರ್ಮಾಣ  Construction of Sadashiva Muttyana Matha to begin soon.

ಶೀಘ್ರದಲ್ಲೇ ಸದಾಶಿವ ಮುತ್ತ್ಯಾನ ಮಠ ನಿರ್ಮಾಣ  

ಲೋಕದರ್ಶನ ವರದಿ  

ಇಂಡಿ 12: ತಾಲ್ಲೂಕಿನ ಚಿಕ್ಕಬೇವನೂರ ಗ್ರಾಮದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ತ್ಯಾನ ನೂತನ ಮಠ ನಿರ್ಮಾಣದ ಭೂಮಿಪೂಜೆ ನೆರವೇರಿತು. ನಾಗಠಾಣದ ಉದಯಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯರ ಅಮೃತ ಹಸ್ತದಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯರು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳು ಸಮಾಜದಲ್ಲಿ ಭಕ್ತಿ, ಸಂಸ್ಕಾರ, ಸದ್ಭಾವನೆ ಮತ್ತು ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಭಕ್ತರ ಶ್ರದ್ಧೆ ಮತ್ತು ಒಗ್ಗಟ್ಟಿನ ಪ್ರಯತ್ನದಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಮಠವು ಮುಂದಿನ ದಿನಗಳಲ್ಲಿ ಭಕ್ತರಿಗೆ ಆಧ್ಯಾತ್ಮಿಕ ನೆಮ್ಮದಿ ನೀಡುವ ಪವಿತ್ರ ತಾಣವಾಗಿ ಬೆಳೆಯಲಿ ಎಂದು ಆಶಿಸಿದರು. ಪೂಜ್ಯ ಓಂಕಾರಯ್ಯ ಮಾತನಾಡಿ, ಮಠಗಳು ಕೇವಲ ಪೂಜಾ ಸ್ಥಳಗಳಾಗದೆ ಧಾರ್ಮಿಕ ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೇಂದ್ರಗಳಾಗಬೇಕು. ಮಠದ ನಿರ್ಮಾಣ ಕಾರ್ಯಕ್ಕೆ ಭಕ್ತರು ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಭೂದಾನಿಗಳಾದ ದುಂಡಪ್ಪ ವರವಂಟಿ ಹಾಗೂ ಮಹಾದೇವ ವರವಂಟಿ ಅವರನ್ನು ಶ್ರೀಗಳಿಂದ ಸನ್ಮಾನಿಸಲಾಯಿತು.  

ವೇ.ಮೂ. ಕಲ್ಲಯ್ಯ ಹಿರೇಮಠ, ಪಮ್ಮಯ್ಯ ಮಠಪತಿ, ವಿಜಯಕುಮಾರ ಜಂಬಗಿ, ಸೋಮಣ್ಣ ಪ್ರಚಂಡಿ, ನಾಗಣಗೌಡ ಬಿರಾದಾರ, ಧರೆಪ್ಪ ಮದರಖಂಡಿ, ಸಂಜೀವ ದಶವಂತ, ರಾಮಚಂದ್ರ ಭೋಸಲೆ, ಬಶೀರ ತಾಸೆವಾಲೆ, ಅಶೋಕ ಅಗಸರ, ಸಿದ್ದು ಹೊನ್ನಕೋರೆ, ಗಂಗಪ್ಪ ದೇಸಾಯಿ, ಚನ್ನಪ್ಪ ದೇಸಾಯಿ, ಸಿದ್ದಪ್ಪ ಮುಟಗೇರ, ಸತೀಶ ಮದರಖಂಡಿ, ಶ್ರೀಶೈಲ ಮುಟಗೇರ, ಶಂಕರ ದೇಸಾಯಿ ಸೇರಿದಂತೆ ಗ್ರಾಮದ ಗಣ್ಯರು, ಮುಖಂಡರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.