ಹಾನಗಲ್ 19: ಪ್ರಾಥಮಿಕ ಆರೋಗ್ಯ ಚಿಕಿತ್ಸೆಯನ್ನು ಸ್ಥಳೀಯವಾಗಿ ದೊರಕಿಸುವ ನಿಟ್ಟಿನಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿ, ಸೌಲಭ್ಯ ಕಲ್ಪಿಸಲು ಗಮನ ನೀಡಲಾಗಿದೆ. ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಮಾರನಬೀಡ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ 15 ನೇ ಹಣಕಾಸು ಯೋಜನೆಯಡಿ 65 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ರಕ್ತದೊತ್ತಡ ಪರೀಕ್ಷೆ, ಗರ್ಭಿಣಿಯರ ಆರೋಗ್ಯ ತಪಾಸಣೆ, ಸಣ್ಣಪುಟ್ಟ ಚಿಕಿತ್ಸೆಗಳನ್ನು ಈ ಕೇಂದ್ರಗಳ ಮೂಲಕ ನೀಡಲಾಗುತ್ತದೆ. ಅಲ್ಲದೇ ಸಮುದಾಯದಲ್ಲಿ ಆರೋಗ್ಯ ಜಾಗೃತಿ ಸಹ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷ ಈರಣ್ಣ ಜಾಡರ, ಉಪಾಧ್ಯಕ್ಷೆ ನಗೀನಾಬಾನು ಹರವಿ, ಸದಸ್ಯರಾದ ಪ್ರಕಾಶ ಕೋಳೂರ, ಸಹದೇವಪ್ಪ ಸಂಶಿ, ಬಸಪ್ಪ ಒಡೆಯರ್, ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಮುಖಂಡರಾದ ಮಂಜಪ್ಪ ಹರ್ಲಾಪೂರ, ಸಿದ್ದಪ್ಪ ಚೆಂಗಳೆಮ್ಮನವರ, ಮಲ್ಲೇಶ ನೆರ್ಕಿಮನಿ, ಮಲ್ಲೇಶಪ್ಪ ಕರಿಯಪ್ಪನವರ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಬಸಪ್ಪ ಚೆನ್ನಕ್ಕನವರ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.