ಸಂವಿಧಾನಕ್ಕೆ ತಿದ್ದುಪಡಿ ತಂದದ್ದು ಕಾಂಗ್ರೆಸ್: ಗಡ್ಕರಿ

ವಾರ್ಧಾ: ಅಧಿಕಾರದಲ್ಲಿದ್ದಾಗ ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತಂದ ಕಾಂಗ್ರೆಸ್‌ ಪಕ್ಷವು, ಇದೀಗ ಬಿಜೆಪಿಯು ಸಂವಿಧಾನ ಬದಲಾವಣೆಗೆ ಯತ್ನಿಸುತ್ತಿದೆ ಎಂದು ಭಾವನಾತ್ಮಕ ನೆಲೆಯಲ್ಲಿ ಆರೋಪ ಮಾಡುತ್ತಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಆರೋಪಿಸಿದ್ದಾರೆ.

ವಿದರ್ಭದ ವಾರ್ಧಾ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಚಾರ ಸಭೆಗಳಲ್ಲಿ ಗಡ್ಕರಿ ಭಾನುವಾರ ಭಾಗಿಯಾದರು. ಇದೇ ವೇಳೆ, ಬಿಜೆಪಿಯು ಕಾರ್ಯಕರ್ತರಿಂದ ಕೂಡಿರುವ ಪಕ್ಷವಾಗಿದ್ದರೆ, ಕಾಂಗ್ರೆಸ್‌ ಕುಟುಂಬ ರಾಜಕಾರಣದಲ್ಲಿ ನಿರತವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಸಂವಿಧಾನವನ್ನು ಬದಲಿಸಲಿದೆ ಎಂದು ಅವರು (ಕಾಂಗ್ರೆಸ್‌) ಭಾವನಾತ್ಮಕ ನೆಲೆಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಅವರು ಹೇಳಿದ್ದು ಸುಳ್ಳು ಎಂದು ಸಚಿವ ಗಡ್ಕರಿ ಟೀಕಿಸಿದ್ದಾರೆ. 

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತಂದಿತ್ತು ಎಂದು ಸ್ಮರಿಸಿದ್ದಾರೆ.

ಸಂವಿಧಾನವನ್ನು ಬದಲಿಸಿದ ಅವರು, ನಮ್ಮನ್ನು ದೂರುತ್ತಿದ್ದಾರೆ. ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಎಷ್ಟು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ? ಆದರೂ, ಕಾಂಗ್ರೆಸ್‌ ಅವುಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷವೂ ಅಲ್ಲ, ಗಡ್ಕರಿಯದ್ದೂ ಅಲ್ಲ. ಇದು ತಮ್ಮ ಪ್ರಾಣವನ್ನೇ ಸಮರ್ಪಿಸಲು ಸಿದ್ಧವಿರುವ ಕಾರ್ಯಕರ್ತರದ್ದು ಎಂದು ಹೇಳಿಕೊಂಡಿದ್ದಾರೆ. ಬಿಜೆಪಿಯು ಕಾರ್ಯಕರ್ತರ ಪಕ್ಷವಾಗಿದೆ. ಇಲ್ಲಿ, ಒಬ್ಬ ಪ್ರಧಾನಿ ಮತ್ತೊಬ್ಬ ಪ್ರಧಾನಿಯಿಂದ ಜನ್ಮ ಪಡೆದಿಲ್ಲ. ಸಂಸದ, ಮತ್ತೊಬ್ಬ ಸಂಸದನಿಂದ ಹಾಗೆಯೇ, ಶಾಸಕ ಇನ್ನೊಬ್ಬ ಶಾಸಕನಿಂದ ಹುಟ್ಟಿಲ್ಲ' ಎಂದು ಪ್ರತಿಪಾದಿಸಿದ್ದಾರೆ.