ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ರಾಹುಲ್ ಗಾಂಧಿ ತೀವ್ರ ಆಕ್ಷೇಪ

Congress strongly objected to RSS chief Mohan Bhagwat's statement

ನವದೆಹಲಿ 15: ಭಾರತಕ್ಕೆ ನಿಜವಾದ ಸ್ವಾತಂತ್ರ್ಯ 1947 ರಲ್ಲಿ ಸಿಕ್ಕಿಲ್ಲ, ರಾಮ ಮಂದಿರ ಪ್ರತಿಷ್ಠಾಪನಾ ದಿನದಂದು ಸಿಕ್ಕಿತು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಕಾಂಗ್ರೆಸ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮೋಹನ್ ಭಾಗವತ್ ಅವರ ಹೇಳಿಕೆ ಎಲ್ಲಾ ಭಾರತೀಯರಿಗೆ ಮಾಡಿದ ಅವಮಾನ ಎಂದು ಟೀಕಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಇಂದು ಕಾಂಗ್ರೆಸ್ ನ ನೂತನ ಪ್ರಧಾನ ಕಚೇರಿ, ಇಂದಿರಾ ಗಾಂಧಿ ಭವನ ಉದ್ಘಾಟನೆಯ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಮೋಹನ್ ಭಾಗವತ್ ಅವರು ಸ್ವಾತಂತ್ರ್ಯ ಚಳುವಳಿ ಮತ್ತು ಸಂವಿಧಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ದೇಶಕ್ಕೆ ಹೇಳುವ ಧೈರ್ಯ ಹೊಂದಿದ್ದಾರೆ. ಅವರು ನಿನ್ನೆ ಹೇಳಿದ್ದು ದೇಶದ್ರೋಹ... ಏಕೆಂದರೆ ಅವರು ಸಂವಿಧಾನ ಅಮಾನ್ಯವಾಗಿದೆ ಮತ್ತು ಬ್ರಿಟಿಷರ ವಿರುದ್ಧದ ಹೋರಾಟವೂ ಅಮಾನ್ಯ ಎಂದು ಹೇಳುತ್ತಿದ್ದಾರೆ ಎಂದರು.

ಇದನ್ನು ಸಾರ್ವಜನಿಕವಾಗಿ ಹೇಳುವ ದಿಟ್ಟತನ ಅವರಿಗೆ ಇದೆ. ಬೇರೆ ಯಾವುದೇ ದೇಶದಲ್ಲಿ ಈ ರೀತಿ ಹೇಳಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಇದು ಸತ್ಯ ಎಂದು ರಾಹುಲ್ ಗಾಂಧಿ ಹೇಳಿದರು.

ಇನ್ನು ಭಾಗವತ್ ಅವರ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರು ಇಂತಹ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ದೇಶದಲ್ಲಿ ತಿರುಗಾಡುವುದು ಕಷ್ಟಕರವಾಗುತ್ತದೆ ಎಂದು ಎಚ್ಚರಿಸಿದರು.