ಕೆ.ಆರ್.ಪುರಂ ಗೆಲ್ಲಲು ಕಾಂಗ್ರೆಸ್ ರಣತಂತ್ರ: ಯಡಿಯೂರಪ್ಪ ಆಡಿಯೋ ಬಗ್ಗೆ ಸುಪ್ರೀಂಕೋರ್ಟ್‌ ಗಮನಕ್ಕೆ ತರಲು ನಿರ್ಧಾರ

ಬೆಂಗಳೂರು, ನ. 2: ಕೆ.ಆರ್.ಪುರಂ ಉಪಚುನಾವಣೆಗೆ ಪಕ್ಷ ಸಂಘಟನೆ ಹಾಗೂ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ನಾಯಕರು ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆಯಲ್ಲಿ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ , ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ,‌ ಮಾಜಿ ಸಚಿವ ಹೆಚ್.ಕೆ.ಪಿ.ಪಾಟೀಲ್, ಎಸ್.ಆರ್.ಪಾಟೀಲ್, ಯು.ಟಿ.ಖಾದರ್, ವೀರಣ್ಣ ಮತ್ತೀಕಟ್ಟಿ  ಹಾಗೂ ಕೆ.ಆರ್.ಪುರಂ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

ಸಭೆಯಲ್ಲಿ ಅನರ್ಹ ಶಾಸಕ ಬೈರತಿ ಬಸವರಾಜ್ ಅವರಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. 15 ಕ್ಷೇತ್ರಗಳನ್ನೂ ಗಂಭೀರವಾಗಿ ಪರಿಗಣಿಸಿದ್ದು, 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇ ಬೇಕು. ಬೈರತಿ ಬಸವರಾಜು ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದ್ದರೂ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಪಕ್ಷ ಮತ್ತೆ ಗೆಲುವು ಸಾಧಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಬೆದರಿಕೆ ಮಣಿಯದೆ ಪಕ್ಷ ಸಂಘಟಿಸಿ, ಮನೆ-ಮನೆಗೆ ಭೇಟಿ ನೀಡಿ ಮತದಾರರನ್ನು ಸೆಳೆಯುವಂತೆ ಕೆ.ಆರ್.ಪುರಂ ಕಾರ್ಯಕರ್ತರಿಗೆ ಸೂಚಿಸಲಾಯಿತು.

ಸಭೆ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾತನಾಡಿ, ಅಕ್ಟೋಬರ್ 29 ರಂದು ಹುಬ್ಬಳ್ಳಿಯಲ್ಲಿ ನಗರದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅನರ್ಹರ ಬಗ್ಗೆ ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋ ವಿಡಿಯೋ ಟೇಪ್ ಬಹಿರಂಗವಾಗಿದೆ. ಆಪರೇಷನ್ ಕಮಲದ ಬಗ್ಗೆ ಚರ್ಚಿಸಿರುವುದು ಶಾಸಕರ ಖರೀದಿ ಸಂವಿಧಾನ ಬಾಹಿರವಲ್ಲವೇ ? ಎಂದು ಪ್ರಶ್ನಿಸಿದರು.

ಶಾಸಕರ ಖರೀದಿಗೆ ಆಪರೇಷನ್ ಕಮಲ ನಡೆಸಿ ಸರ್ಕಾರ ರಚಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿರುವ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ಸಲ್ಲಿಲಾಗುವುದು ಎಂದರು.

ಈ ಬಗ್ಗೆ  ಹೈಕಮಾಂಡ್ ಗಮನಕ್ಕೆ ತರುವುದರ ಜೊತೆಗೆ ಯಡಿಯೂರಪ್ಪ ಚರ್ಚೆ ಕುರಿತು ಸುಪ್ರೀಂಕೋರ್ಟ್ ಗೂ ದಾಖಲೆ ಸಲ್ಲಿಸುತ್ತೇವೆ. ಒಬ್ಬ ಕೇಂದ್ರ ಸಚಿವರೇ ಪ್ರಜಾಪ್ರಭುತ್ವ ನಾಶ ಮಾಡಿದ್ದಾರೆ ಎಂದ ಮೇಲೆ ಪ್ರಜಾಪ್ರಭುತ್ವಕ್ಕೆ ರಕ್ಷಣೆ ಎಲ್ಲಿಂದ ಬರುತ್ತದೆ. ಇದೊಂದು ಗಂಭೀರ ಅಪರಾಧ. ಹೀಗಾಗಿ ಕೂಡಲೇ ಯಡಿಯೂರಪ್ಪ ಮತ್ತು ಅಮಿತ್ ಶಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

17  ಶಾಸಕರು ರಾಜೀನಾಮೆ ಸಲ್ಲಿಸಿದ್ದಾಗ ಅವರ ರಾಜೀನಾಮೆಗೂ ಸಂಬಂಧ ಇಲ್ಲ ಎನ್ನುತ್ತಿದ್ದ ಯಡಿಯೂರಪ್ಪ ಆಡಿಯೋದಲ್ಲಿ  ಹೇಳಿದ್ದೇನು? ಅಮಿತ್ ಷಾ ನೇತೃತ್ವದಲ್ಲಿ ಆಪರೇಷನ್ ಕಮಲ ನಡೆದಿದೆ. ಅನರ್ಹ ಶಾಸಕರನ್ನು ರಕ್ಷಣೆ ಮಾಡಿದ್ದು ಅವರೇ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಎರಡೂವರೆ ತಿಂಗಳು ಅವರನ್ನು ರಕ್ಷಿಸಿದ್ದಾರೆ. ಅನರ್ಹರ ತ್ಯಾಗದಿಂದಲೇ ಸರ್ಕಾರ ರಚನೆಯಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗುವುದರ ಜೊತೆಗೆ ಕೇಂದ್ರದಲ್ಲಿ ಗೃಹ ಸಚಿವರು ಕೂಡ ಆಗಿದ್ದಾರೆ. ಆಪರೇಷನ್ ಕಮಲದಲ್ಲಿ ಅವರೇ ನೇರ ಭಾಗಿದಾರರಾಗಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿಸಲು ಶಾಸಕರಿಗೆ ಆಸೆ ಅಮಿಷ ತೋರಿಸಿ ಸೆಳೆದಿದ್ದಾರೆ ಎಂದು ದೂರಿದರು.

ಶಾಸಕರ ಖರೀದಿಯಲ್ಲಿ ಬಿಜೆಪಿಯವರು ಭಾಗಿ ಆಗಿದ್ದಾರೆ. ಷಾ ಹಾಗೂ ಯಡಿಯೂರಪ್ಪ ಇಬ್ಬರೂ ಸೇರಿ ಪ್ರಜಾಪ್ರಭುತ್ವವನ್ನೇ ನಾಶ ಮಾಡಿದ್ದಾರೆ. ಇದಕ್ಕೆ ಬೇರೇನು ಸಾಕ್ಷಿ ಬೇಕಿಲ್ಲ. ಎಲ್ಲವೂ ವಾಸ್ತವವೇ ಆಗಿದೆ. ಇದಕ್ಕೆ ಯಡಿಯೂರಪ್ಪ ಅವರೇ ಸಾಕ್ಷ್ಯ ಒದಗಿಸಿದ್ದಾರೆ. ಇಂತವರು ಸಾರ್ವಜನಿಕ ಜೀವನದಲ್ಲಿ ಮುಂದುವರಿಯಲು ಅವಕಾಶವಿಲ್ಲ. ಅಮಿತ್ ಷಾ ಹಾಗೂ ಯಡಿಯೂರಪ್ಪ ರಾಜೀನಾಮೆ ಕೊಡಲೇಬೇಕು ಎಂದರು.

ಅನರ್ಹರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ. ನ್ಯಾಯಾಲಯಕ್ಕೆ ಯಡಿಯೂರಪ್ಪ ವಿಚಾರವನ್ನು ಕಾಂಗ್ರೆಸ್ ಪರ ವಕೀಲರು ಸಲ್ಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ದಿನೇಶ್ ಗುಂಡೂರಾವ್ ಮಾತನಾಡಿ, ದೇಶದ ಕೃಷಿ ಹೈನುಗಾರಿಕೆಯನ್ನು ನಾಶಗೊಳಿಸುವ ಆರ್ ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಮಾಡುತ್ತಿದೆ, ನವೆಂಬರ್ 4 ರಂದು ಈ ಸಂಬಂಧ ಶೃಂಗ ಸಭೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಇದಕ್ಕೆ ಸಹಿ ಹಾಕುವ ಬಗ್ಗೆ ಗೌಪ್ಯತೆ ಕಾಪಾಡುತ್ತಿದೆ. ಯಾರ ಗಮನಕ್ಕೂ ತರದೆ ತಟಸ್ಥವಾಗಿಟ್ಟಿದೆ. ಪ್ರತಿಪಕ್ಷಗಳ ಗಮನಕ್ಕೂ ಈ ವಿಚಾರ ತಂದಿಲ್ಲ. ಎಲ್ಲವನ್ನೂ ಕತ್ತಲಿನಲ್ಲಿಟ್ಟು ತಪ್ಪು ನಿರ್ಧಾರ ಅನುಸರಿಸುತ್ತಿದೆ. ಈ ದೊಡ್ಡ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಚರ್ಚೆ, ಪ್ರತಿಪಕ್ಷಗಳ ಜೊತೆ ಪ್ರಧಾನಿ ಚರ್ಚೆ ನಡೆಸಬೇಕಿತ್ತು

ಆದರೆ ಯಾವುದೇ ಚರ್ಚೆಯನ್ನು ಮಾಡದೆ ಸುಮ್ಮನಿದ್ದಾರೆ. ಮುಕ್ತ ವ್ಯಾಪಾರ ನೀತಿಗೆ ಸಹಿ ಹಾಕಿದರೆ ಹೇಗೆ? ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೂ  ಹೊಡೆತ ಬೀಳಲಿದೆ. ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಹೊಡೆತ ಬೀಳಲಿದೆ. ಹೀಗಾಗಿ ಹೋರಾಟ ಮಾಡಲು ಪಕ್ಷ ನಿರ್ಧರಿಸಿದೆ ಎಂದರು.

ಯಡಿಯೂರಪ್ಪನವರ ಆಡಿಯೋ ಬಹಿರಂಗ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ಮೈತ್ರಿ ಸರ್ಕಾರ ಬೀಳಿಸುವ ಕೆಲಸ ಇದರಲ್ಲಿ ಬಹಿರಂಗವಾಗಿದೆ. ಮೈತ್ರಿ ಸರ್ಕಾರ ಬೀಳುವ ಮುನ್ನವೂ ಒಂದು ಆಡಿಯೋ ಬಿಡುಗಡೆ ಆಗಿತ್ತು. ಆಪರೇಷನ್ ಕಮಲದ ಬಗ್ಗೆ ಮಾತಾಡಿ, ಷಾ ಬಗ್ಗೆ ಅವರ ಬಗ್ಗೆ ಇವರೇ ಪ್ರಸ್ತಾಪಿಸಿದ್ದಾರೆ. ಸರ್ಕಾರ ಬೀಳಿಸುವ ಪ್ರಯತ್ನ ಸಂವಿಧಾನ ವಿರೋಧಿ. ಎಲ್ಲರನ್ನೂ ಕರೆದೊಯ್ದು ಸರ್ಕಾರ ಕೆಡವಿದ್ದು ಅನೈತಿಕತೆಯಾಗಿದೆ ಎಂದು ಕಿಡಿಕಾರಿದರು.

ಹೀಗಾಗಿ ಅಮಿತ್ ಷಾ ಮೇಲೆಯೂ ಕ್ರಮ ಜರುಗಿಸಬೇಕು. ರಾಷ್ಟ್ರೀಯ ಮಟ್ಟದಲ್ಲೂ ಇದರ ಚರ್ಚೆಯಾಗಬೇಕು. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲಾಗುವುದು. ಮೈತ್ರಿ ಸರ್ಕಾರದ ಪತನದ ಹೊಣೆಗಾರಿಕೆಯನ್ನು ಅಮಿತ್ ಶಾ ಹೊರಬೇಕು. ಸಂವಿಧಾನ ಬಾಹಿರ ಕೆಲಸ ಮಾಡಿದ್ದಾರೆ. ಹೀಗಾಗಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಡಿಯೋ ತುಣುಕನ್ನು ಸುಪ್ರೀಂಕೋರ್ಟ್ ಗೆ ವಕೀಲರ ಮೂಲಕ ಸಲ್ಲಿಸಲಾಗುವುದು. ಅದೇ ರೀತಿ ಈ ಬಗ್ಗೆ ಪಕ್ಷದಿಂದ ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇವೆ ಎಂದರು.