ಮುಂಬೈ, ನ 2: ಮಹಾರಾಷ್ಟ್ರದಲ್ಲಿ ಮುಂದಿನ ಸರ್ಕಾರ
ರಚಿಸಲು ಶಿವಸೇನೆ ಇಚ್ಛಿಸಿದರೆ ಬೆಂಬಲ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪಕ್ಷದ
ರಾಜ್ಯಸಭಾ ಸದಸ್ಯ ಹುಸೇನ್ ದಳವಾಯ್ ಮನವಿ ಮಾಡಿದ್ದಾರೆ.
ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆ-ಬಿಜೆಪಿ ನಡುವೆ ಸಮನಾಗಿ ಹಂಚಬೇಕು ಎಂದು ಶಿವಸೇನೆ ಪಟ್ಟು ಹಿಡಿದಿರುವ ನಡುವೆ ಹುಸೇನ್ ದಳವಾಯಿ ಈ ಪತ್ರ ಬರೆದಿದ್ದಾರೆ.
ಶಿವಸೇನಾ ಬೇಡಿಕೆಯನ್ನು ಬಿಜೆಪಿ ನಿರಾಕರಿಸಿದೆ. ಮಾತ್ರವಲ್ಲದೆ,
ಮತ್ತೊಮ್ಮೆ ರಚನೆಯಾಗಲಿರುವ ಸರ್ಕಾರದ ನೇತೃತ್ವವನ್ನು ತಾವೇ ವಹಿಸುವುದಾಗಿ ಮುಖ್ಯಮಂತ್ರಿ ದೇವೇಂದ್ರ
ಫಡ್ನವೀಸ್ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
2019 ರ ಲೋಕಸಭಾ ಚುನಾವಣೆಗೆ ಮುನ್ನ ಮೈತ್ರಿ ಪಕ್ಷಳು
50:50 ಸೂತ್ರಕ್ಕೆ ಬಿಜೆಪಿ ಒಪ್ಪಿಕೊಂಡಿದ್ದನ್ನು ಉಲ್ಲೇಖಿಸಿ ಶಿವಸೇನೆ ಅಧಿಕಾರ ಸಮಾನ ಹಂಚಿಕೆಯ ತನ್ನ
ಹಕ್ಕನ್ನು ಪ್ರತಿಪಾದಿಸಿದೆ.
ತಮ್ಮ ಪತ್ರವನ್ನು ಉಲ್ಲೇಖಿಸಿ ಮಾತನಾಡಿದ ದಳವಾಯ್ ಅವರರು,
ಶಿವಸೇನೆ ಮತ್ತು ಬಿಜೆಪಿ ವಿಭಿನ್ನವಾಗಿವೆ. ರಾಷ್ಟ್ರಪತಿ
ಹುದ್ದೆಗೆ ಶಿವಸೇನೆ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಅವರನ್ನು ಬೆಂಬಲಿಸಿತ್ತು. ಶಿವಸೇನೆ
ರಾಜಕೀಯವು ಬಿಜೆಪಿಯಂತಲ್ಲದೆ ಎಲ್ಲರನ್ನೂ ಒಳಗೊಳ್ಳುತ್ತದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು
ಶಿವಸೇನೆಯನ್ನು ಕಾಂಗ್ರೆಸ್ ಬೆಂಬಲಸಬೇಕಾಗಿದೆ. ರಾಜ್ಯದ ಮುಸ್ಲಿಂ ಸಮುದಾಯ ಬಿಜೆಪಿಗಿಂತ ಶಿವಸೇನೆಯನ್ನು
ಒಪ್ಪಿಕೊಳ್ಳುತ್ತದೆ.’ ಎಂದು ಹೇಳಿದ್ದಾರೆ.
ದಳವಾಯ್ ನಿಲುವನ್ನು
ಶಿವಸೇನೆ ಸ್ವಾಗತಿಸಿದೆ. ‘ದಳವಾಯ್ ಸಮಾಜವಾದಿ ಸಿದ್ಧಾಂತಕ್ಕೆ ಸೇರಿದವರಾಗಿದ್ದು, ಪ್ರಗತಿಪರ ಮುಸ್ಲಿಮ್
ಕುಟುಂಬದಿಂದ ಬಂದವರಾಗಿದ್ದಾರೆ. ಅವರ ನಿಲುವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಶಿವಸೇನಾ ಹಿರಿಯ
ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ
(ಎನ್‌ಡಿಎ) ಸ್ಥಾಪಕ ಪಕ್ಷಗಳಲ್ಲಿ ಒಂದಾದ ಶಿವಸೇನೆ ಬೆಂಬಲಿಸುವ ಬಗ್ಗೆ ಕಾಂಗ್ರೆಸ್ ವಿಭಜನೆಯಾಗುವ
ಸಾಧ್ಯತೆಯೂ ಇದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಖರ್ಗೆ, ಸುಶೀಲ್
ಕುಮಾರ್ ಶಿಂಧೆ, ಸಂಜಯ್ ನಿರುಪಮ್ ಮುಂತಾದ ಕಾಂಗ್ರೆಸ್ ನಾಯಕರು ಶೀವಸೇನೆಗೆ ಬೆಂಬಲ ನೀಡುವುದಕ್ಕೆ
ವಿರೋಧಿಸುತ್ತಿದ್ದಾರೆ.