ಕಾಂಗ್ರೆಸ್ ಸುಡುತ್ತಿರುವ ಮನೆ, ದಲಿತ ಸಮುದಾಯ ಕಾಂಗ್ರೆಸ್ ಸೇರಬೇಡಿ: ಎನ್. ಮಹೇಶ ಕರೆ
ವಿಜಯಪುರ 15: ಚುನಾವಣೆಯಲ್ಲಿ ನನ್ನ ಸೋಲಿಗೆ ಸಾವರ್ಕರ್ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದ್ದು ಅಂಬೇಡ್ಕರ್ ರವರು ಬರೆದಿರುವ ಪತ್ರವನ್ನು ಉಲ್ಲೇಖಿಸಿ ಪತ್ರದಲ್ಲಿ ಬರೆದಿರುವುದನ್ನು ತಿರುಚಿ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧವೇ ಅಂಬೇಡ್ಕರ್ ಸೋತಿದ್ದು ಸಾವರ್ಕರ್ ಹೇಗೆ ಕಾಂಗ್ರೆಸ್ ಬೆಂಬಲಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಎರಡು ಬಾರಿ ಅಂಬೇಡ್ಕರ್ ರವರನ್ನು ಸೋಲಿಸಿದ್ದು ಕಾಂಗ್ರೆಸ್ ಮತ್ತು ಸ್ವತಃ ಜವಹಾರಲಾಲ ನೆಹರು ಎಂದು ಮಾಜಿ ಸಚಿವ ಹಾಗೂ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ ಹೇಳಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜನ್ಮಜಯಂತಿ ಕಾರ್ಯಕ್ರಮದ ಅಂಗವಾಗಿ ಕರ್ನಾಟಕದ ಎಲ್ಲೆಡೆ ಅಂಬೇಡ್ಕರ್ ವಿಚಾರಯಾತ್ರೆ ಅಂಗವಾಗಿ ಏ.14 ರಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಚಾರಗೋಷ್ಠಿಯನ್ನು ಡಾ ಬಾಬಾಸಾಹೇಬ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎಸ್.ಸಿ ್ಘ ಎಸ್.ಟಿ ಮೀಸಲು ಎಸ್.ಸಿ.ಪಿ., ಟಿ.ಎಸ್.ಪಿ ಹಣದ ದುರ್ಬಳಕೆ ಬಗ್ಗೆ ಕಾಂಗ್ರೆಸ್ ಸರ್ಕಾರ ಮಾಡಿದ ಮೋಸ. ಗ್ಯಾರೆಂಟಿ ಯೋಜನೆಗಳು ಯಾವುದೇ ರೀತಿಯ ಆಸ್ತಿ ಸೃಷ್ಟಿ, ಶಿಕ್ಷಣಕ್ಕೆ ಸಹಾಯ, ಮೂಲಭೂತ ಸೌಕರ್ಯಕ್ಕೆ ಸಹಾಯ ಮಾಡುವುದಿಲ್ಲ. ಏಳು ಎಸ್.ಸಿ, ಎಸ್.ಟಿ ನಿಗಮಗಳಿಗೆ ನೀವು ಕೊಟ್ಟಿರುವ ಹಣ ಎಷ್ಟು?. 1928ರಲ್ಲಿ ಅಂಬೇಡ್ಕರ್ ರವರು ಎಲ್ಲ ವಯಸ್ಕರಿಗೂ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸಿದಾಗ ಮೋತಿಲಾಲ ನೆಹರು ವಿರೋಧಿಸಿದ್ದು ಏಕೆ? ಅಸ್ಪೃಷ್ಯರಿಗೆ ಮತದಾನದ ಹಕ್ಕು ಸಿಕ್ಕಾಗ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದು ಏಕೆ? 1946ರಲ್ಲಿ ಸಂವಿಧಾನ ರಚನಾ ಸಭೆಗೆ ಅಂಬೇಡ್ಕರ್‌ರವರನ್ನು ಬರದಂತೆ ತಡೆದಿದ್ದು ಯಾರು? ಅಂಬೇಡ್ಕರ್ ರವರು ಗೆದ್ದ ಪ್ರದೇಶವನ್ನು ಪೂರ್ವಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದು ದೇಶದ್ರೋಹ ಅಲ್ಲದೇ ಮತ್ತೇನು? 1951ರಲ್ಲಿ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿದ್ದು ಏಕೆ? ನೆಹರೂರವರಿಗೆ ಅಂಬೇಡ್ಕರ್ ರವರು ಬರೆದಿರುವ ಪತ್ರಗಳೇ ಪ್ರಧಾನಿಗಳ ಕಛೇರಿಯಲ್ಲಿಲ್ಲ ಕಾರಣವೇನು ? ಹಿಂದೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕುಗಳನ್ನು ನೀಡಬೇಕೆಂದು ಹಿಂದೂ ಕೋಡ್ ಬಿಲ್ ಮಂಡಿಸಿದಾಗ ಅದನ್ನು ಸೋಲಿಸಿದ್ದು ಯಾರು? ಎಂದು ಪ್ರಶ್ನಿಸಿದರು.
ಎಸ್.ಸಿ.ಎಸ್.ಟಿ ಗಳಷ್ಟೇ ಶೋಷಣೆಗೊಳಗಾದ ಇತರ ಹಿಂದುಳಿದ ಜಾತಿಗಳನ್ನು ಗುರುತಿಸಿ ಮೀಸಲಾತಿ ಕೊಡಲು ಆಯೋಗ ರಚಿಸಿ ಎಂದಾಗಲೂ ಕಾಂಗ್ರೆಸ್ ರಚಿಸುವುದಿಲ್ಲ. ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಸಂಪೂರ್ಣ ಬಗೆಹರಿಸಿ ಎಂದಾಗಲೂ ಮಾಡುವುದಿಲ್ಲ. ಮುಸ್ಲಿಂರಿಗೆ ವಹಿಸಿದಷ್ಟು ಕಾಳಜಿ ಎಸ್.ಸಿ, ಎಸ್.ಟಿ ಹಿಂದುಳಿದ ವರ್ಗಗಳಿಗೂ ವಹಿಸಿ ಎಂದರೂ ಕೇಳಲಿಲ್ಲ. ಕಾನೂನು ಸಚಿವಾಲಯದ ಬದಲು ಯೋಜನಾಖಾತೆ, ಹಣಕಾಸು ಖಾತೆ ಕೊಡಿ ಎಂದರೂ ಕೊಡಲಿಲ್ಲ. ಮೊದಲ ಆರು ಪಂಚವಾರ್ಷಿಕ ಯೋಜನೆಗಳ 30 ವರ್ಷ ಎಸ್.ಸಿ, ಎಸ್.ಟಿ ಗಳ ಅಭಿವೃದ್ಧಿಗೆ ಒಂದು ರೂಪಾಯಿಯೂ ಕೊಟ್ಟಿರಲಿಲ್ಲ. ಇದೆಲ್ಲವನೂ ತಿಳಿದುಕೊಂಡೇ ಅಂಬೇಡ್ಕರ್ರವರು ಕಾಂಗ್ರೆಸ್ ಸುಡುತ್ತಿರುವ ಮನೆ, ದಲಿತ ಸಮುದಾಯ ಕಾಂಗ್ರೆಸ್ ಸೇರಬೇಡಿ ಎಂದು ಹೇಳಿದ್ದು. ದೆಹಲಿಯಲ್ಲಿ ಅಂಬೇಡ್ಕರ್ರವರ ಶವಸಂಸ್ಕಾರಕ್ಕೆ ಸ್ಥಳಾವಕಾಶ ನೀಡದೇ ಇರುವುದು ನಿಮ್ಮ ಮನಸಿನಲ್ಲಿನ ಅಸ್ಪೃಷ್ಯತೆಯ ಪ್ರತಿಬಿಂಬ ಎಂದು ಕಿಡಿಕಾರಿದರು.
ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಜೀವನದ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿ ಮಾಡುತ್ತಿರುವುದು ಭಾರತೀಯ ಜನತಾ ಪಕ್ಷ. ಸಂವಿಧಾನವನ್ನು ಸ್ವಂತ ಲಾಭಕ್ಕಾಗಿ ತುರ್ತುಪರಿಸ್ಥಿತಿ ತಂದು ಬದಲಾಯಿಸಿದ್ದೇ ಇಂದಿರಾಗಾಂಧಿ. 106ರಲ್ಲಿ 75 ತಿದ್ದುಪಡಿಗಳು ಮಾಡಿ ಸಂವಿಧಾನಕ್ಕೆ ಅಪಚಾರವೆಸಗಿದ್ದೇ ಕಾಂಗ್ರೆಸ್. ವಾಜಪೇಯಿ ಮತ್ತು ಮೋದಿಜಿ ಮಾಡಿರುವ ತಿದ್ದುಪಡಿಗಳು ದೇಶದ ಪ್ರಗತಿಗಾಗಿಯೇ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಹಿಸಿದ್ದರು. ಸ್ವಾಗತವನ್ನು ಎಸ್.ಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಮಂಜುನಾಥ ಮೀಸೆ ನೆರವೇರಿಸಿದರು. ವೇದಿಕೆ ಮೇಲೆ ರಾಜ್ಯ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಹೂಡಿ ಮಂಜುನಾಥ, ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಮಾಶ್ಯಾಳ ನಾಗಠಾಣ ಮಂಡಲದ ಮುಖಂಡ ಸಂಜೀವ ಐಹೊಳೆ, ಮುಖಂಡ ಜಗದೀಶ ಹಿರೇಮನಿ, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಾಬು ದೊಡಮನಿ, ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ ನಾಯಕ, ರಾಜ್ಯ ಪ್ರಕೋಷ್ಠ ಸಮಿತಿ ಸದಸ್ಯ ಚಿದಾನಂದ ಚಲವಾದಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಸ್ವಪ್ನಾ ಕಣಮುಚನಾಳ ವಿಜಯ ಜೋಶಿ ಮತ್ತು ಇತರರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ರವಿಕಾಂತ ವಗ್ಗೆ ವಂದಿಸಿದರು.