ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲ; ಗೋವಿಂದಗೌಡ್ರ

ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲ; ಗೋವಿಂದಗೌಡ್ರ Congress has completely failed in governing the state: Govinda Gowdra

ಗದಗ 30: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕಳೆದ 2 ವರ್ಷಗಳಿಂದ ಜನರಿಗೆ ಉತ್ತಮ ಮತ್ತು ಕ್ರಿಯಾಶೀಲ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಲಂಚಗುಳಿತನ ಸೇರಿದಂತೆ ಭ್ರಷ್ಟಾಚಾರ ಹೆಚ್ಚುತ್ತಿದ್ದು, ಸ್ವಜನಪಕ್ಷಪಾತ ತುಂಬಿ ತುಳುಕುತ್ತಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಮತ್ತು ಮುಖಂಡರುಗಳು ರಾಜ್ಯ ಸರ್ಕಾರದ  ಸಚಿವರುಗಳ ವಿರುದ್ಧ ಬಹಿರಂಗವಾಗಿ ಸಾಕ್ಷಿ ಸಮೇತ ದಾಖಲೆಗಳೊಂದಿಗೆ ಆರೋಪಿಸಿದ್ದಾರೆ.ಇದಕ್ಕೆ ಉದಾಹರಣೆ ಎಂಬಂತೆ ವಸತಿ ಇಲಾಖೆಯು ರಾಜ್ಯದಲ್ಲಿನ ಅತ್ಯಂತ ಹಿಂದುಳಿದ, ಬಡ ಕುಟುಂಬಗಳ ನಿವೇಶನ ಹಾಗೂ ವಸತಿ ರಹಿತ ನೈಜ ಪಲಾನುಭವಿಗಳಿಗೆ ಮೀಸಲಾಗಿರುವ ವಸತಿ ಯೋಜನೆಗಳನ್ನು ಲಂಚ ನೀಡುವವರಿಗೆ ಮಾತ್ರ ನೀಡುತ್ತಿದ್ದು, ಇಲಾಖೆಯು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಈಗಾಗಲೇ  ಸಾಕಷ್ಟು ಸುದ್ದಿಯಾಗಿದೆ ಎಂದು ಕರ್ನಾಟಕ ಪ್ರದೇಶ ಜನತಾದಳ (ಜ್ಯಾತ್ಯಾತೀತ) ಪಕ್ಷದ ರಾಜ್ಯ ವಕ್ತಾರ ವೆಂಕನಗೌಡಾ ಗೋವಿಂದಗೌಡ್ರ ತಿಳಿಸಿದರು.           

ಇಂದು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಸಡೆಸಿ ಮಾತನಾಡಿದ ಅವರು  ಸರ್ಕಾರ ಇದುವರೆಗೂ ರಾಜ್ಯದ ಜನತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಕೆರೆ ಕಟ್ಟೆಗಳ ಪುನಶ್ಚೇತನ, ಒಳಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮುಂತಾದವುಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುತ್ತದೆ. ಅಂತೆಯೇ, ಗುತ್ತಿಗೆದಾರರ ಬಾಕಿ ಹಣ ಪಾವತಿ ಮಾಡುವಲ್ಲಿಯೂ ಸಹ ವಿಳಂಬ ಮಾಡುತ್ತಾ ಬಂದಿದ್ದು, ಬಡವರ ಹಾಗೂ ರೈತ ವಿರೋಧಿ ಸರ್ಕಾರವಾಗಿ ಮಾರ​‍್ಪಟಟಿರುತ್ತದೆ. ಪರಿಶಿಷ್ಟರಿಗೆ ಮೀಸಲಾಗಿರುವ ಹಣದಲ್ಲಿಯೂ ಅತ್ಯಂತ ತಾರತಮ್ಯ ವೆಸಗುತ್ತಿದ್ದು ಆ ವರ್ಗದ ಜನರಿಗೆ ಅನ್ಯಾಯ ಮಾಡುತ್ತಲಿದ್ದು, ಕೇವಲ ತುಷ್ಠಿಕರಣದ ರಾಜಕಾರಣ ಮಾಡುತ್ತಲ್ಲಿದ್ದು ರಾಜ್ಯದ ಜನರಿಗೆ ಘನಘೋರ ಅನ್ಯಾಯವೆಸಗಿದೆ.            

ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಒದಗಿಸಬೇಕಾದ ಮನೆಗಳ ಹಂಚಿಕೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿರುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೇ ನೇರವಾಗಿ ವಸತಿ ಸಚಿವರಾದ ಜಮೀರ್ ಅಹ್ಮದ ಖಾನ್ ರವರ ವಿರುದ್ಧ ಆಪಾದನೆ ಮಾಡಿರುತ್ತಾರೆ. ಮುಂದುವರೆದು, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ರಾಜ್ಯ ಸರ್ಕಾರ ಕಳೆದ 2 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ಜನರನ್ನು ವಂಚಿಸುತ್ತಿರುವುದಾಗಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಹೊತ್ತಿರುವ  ಜಮೀರ್ ಅಹಮದ್ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.           

ಅತೀವ ಭ್ರಷ್ಟಾಚಾರ ಆಡಳಿತ ವೈಫಲ್ಯದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ಸಂವಿಧಾನ ಬದ್ಧವಾಗಿ ಆಡಳಿತ ನಡೆಸಲು ನಿರ್ದೇಶನ ನೀಡಬೇಕೆಂದು ಗದಗ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.                   

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ  ಎಂ ಎಸ್ ಪರ್ವತಗೌಡ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ವೀರಣ್ಣ ಬಾಳಿಕಾಯಿ, ಕಾರ್ಯದರ್ಶಿ ವೀರಭದ್ರೇಶ್ವರ ಅಕ್ಕಿ, ಬಸವರಾಜ ಅಪ್ಪಣ್ಣನವರ, ಪ್ರಫುಲ್ ಪುಣೇಕರ ಸೇರಿದಂತೆ ಇತರರು ಭಾಗಿಯಾಗಿದ್ದರು.