ಉಡುಪಿ, ಅ 26: ಅನರ್ಹಗೊಂಡಿರುವ 15 ಶಾಸಕರಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ಮುಚ್ಚಿದ್ದು, ಅವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವ ಪ್ರಶ್ನೇಯೇ ಇಲ್ಲ ಎಂದು ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ( ಕೆಪಿಸಿಸಿ) ಅಧ್ಯಕ್ಷ ದಿನೇಶ್ ಗುಂಡೂರಾವ್ ಶನಿವಾರ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲ ಅನರ್ಹ ಶಾಸಕರು ತಮ್ಮನ್ನು ಸಂಪರ್ಕಿಸಿ, ಕಾಂಗ್ರೆಸ್ ಪಕ್ಷ ಮರು ಸೇರ್ಪಡೆಯ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ, ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳದಿರಲು ಕಾಂಗ್ರೆಸ್ ನಿರ್ಧರಿಸಿದೆ. ಮೈತ್ರಿ ಕೂಟ ಸರ್ಕಾರಕ್ಕೆ ದ್ರೋಹವೆಸಗಿದ ಅನರ್ಹರನ್ನು ಯಾವುದೇ ಕಾರಣಕ್ಕೂ ಮರು ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಮಂಜೂರು ಮಾಡಿರುವ ಯೋಜನೆಗಳನ್ನು ಬಿ .ಎಸ್ . ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರದ್ದುಪಡಿಸಿದೆ. ಕಾಂಗ್ರೆಸ್, ಜೆಡಿಎಸ್ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದ್ದ ಅನುದಾನಗಳನ್ನು ಹಿಂಪಡೆಯಲಾಗಿದೆ ಎಂದ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಬಿಜೆಪಿ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅವರ ಸ್ವಪಕ್ಷದ ನಾಯಕರೇ ಬೆಂಬಲಿಸಿದ ಕಾರಣ, ಅಸಹಾಯಕತೆಗೊಳಗಾಗಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದಲ್ಲಿ ಟೀಂ ವರ್ಕ್ ಎಂಬುದೇ ಇಲ್ಲ.. ಒಬ್ಬಬ್ಬ ಸಚಿವರು ಒಂದು ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದರು. ರಾಜ್ಯ ಹಿಂದೆಂದೂ ಕಂಡು ಕೇಳರಿಯದ ನೆರೆ ಹಾಗೂ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದ್ದರೂ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಯಾವುದೇ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಸಾಲುತ್ತಿಲ್ಲ ಎಂದು ಅವರು ದೂರಿದರು.