ನವದೆಹಲಿ 18: ಕಾಂಗ್ರೆಸ್‌ನ ಸುಳ್ಳುಗಳಿಂದ ಹಲವಾರು ವರ್ಷಗಳ ಕಾಲ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನಗಳನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಿರುಗೇಟು ನೀಡಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ರಾಜೀನಾಮೆ ನೀಡಬೇಕೆಂಬ ಕಾಂಗ್ರೆಸ್ ಆಗ್ರಹಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಟ್ವೀಟರ್ ಮೂಲಕ ಈ ಪ್ರತಿಕ್ರಿಯೆ ನೀಡಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಹಾದಿಯನ್ನು ಕಾಂಗ್ರೆಸ್ ಪಕ್ಷ ತನ್ನ ಕೊಳಕು ಮನಸ್ಥಿತಿಯಿಂದ ಸಾಧ್ಯವಾದ ಸಂದರ್ಭಗಳೆಲ್ಲಾ ನಾಶಗೊಳಿಸುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಅವಮಾನಗೊಳಿಸಿದೆ. ಅಂಬೇಡ್ಕರ್ ಅವರು ಎಸ್ ಸಿ, ಎಸ್ ಟಿ ಸಮುದಾಯದ ಹಕ್ಕುಗಳ ಪ್ರತಿಪಾದಕರೆಂದೇ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಬಿಆರ್ ಅಂಬೇಡ್ಕರ್ ಅವರಿಗೆ ಒಂದೆರಡು ಬಾರಿ ಅವಮಾನಿಸಿಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಮಾತ್ರ ನಿರಾಕರಿಸಿಲ್ಲ, ಜೊತೆಗೆ ಎರಡು ಬಾರಿ ಚುನಾವಣೆಯಲ್ಲೂ ಅವರನ್ನು ಸೋಲಿಸಿತ್ತು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಲು ಕೂಡಾ ಕಾಂಗ್ರೆಸ್ ನಿರಾಕರಿಸಿತ್ತು ಎಂದು ಮೋದಿ ಟ್ವೀಟ್ ಮೂಲಕ ಕಾಂಗ್ರೆಸ್ ಗೆ ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲೇ ಎಸ್ ಸಿ, ಎಸ್ ಟಿ ಸಮುದಾಯದ ವಿರುದ್ಧದ ಹತ್ಯಾಕಾಂಡ ನಡೆದಿವೆ. ಹಲವಾರು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಎಸ್ ಸಿ, ಎಸ್ ಟಿ ಸಮುದಾಯದ ಏಳಿಗೆಗೆ ಏನೂ ಮಾಡಿಲ್ಲ ಎಂದು ಪ್ರಧಾನಿ ದೂರಿದರು.