ರಾಜೀನಾಮೆ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಒಬಿಸಿ ವಿಭಾಗ ನಿರ್ಧಾರ

ಬೆಂಗಳೂರು,ಡಿ 17 :      ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ತಮ್ಮ ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸಲು ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿ ನಿರ್ಧರಿಸಿದೆ. 

ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿಯೋಗದ ಮೂಲಕ ಆಗಮಿಸಿ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಡಿಕೊಳ್ಳಲು ಸಮಿತಿ ನಿರ್ಧರಿಸಿದೆ. 

ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಎಂ ಡಿ ಲಕ್ಷ್ಮಿ ನಾರಾಯಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವಿ ಮಾಡಲು ಹಾಗೂ ತಾವು ಕೈಗೊಂಡ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡಿಗೆ ಪತ್ರರೂಪದಲ್ಲಿ ತಲುಪಿಸಲು ನಿರ್ಧರಿಸಿದೆ.  

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಂ ಡಿ ಲಕ್ಷ್ಮಿನಾರಾಯಣ, ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಬಾರದು. ಜೊತೆಗೆ ಸಿದ್ದರಾಮಯ್ಯ ರಾಜೀನಾಮೆಯನ್ನು ಹಿಂಪಡೆಯಬೇಕು. ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕಾರ ಮಾಡಿದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಇದರಿಂದಾಗಿ ಸಿದ್ದರಾಮಯ್ಯ ರಾಜೀನಾಮೆಯನ್ನು ಸ್ವೀಕರಿಸಬಾರದು ಎಂದು ಹೈಕಮಾಂಡ್ ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. 

ಈಗಿನ ಪಕ್ಷದ ಪರಿಸ್ಥಿತಿಗೆ ಇದು ಸರಿಯಾದ ನಿರ್ಧಾರವಲ್ಲ. ನಾವು ಈಗ ಸಿದ್ದರಾಮಯ್ಯ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಎಐಸಿಸಿ ಹೈಕಮಾಂಡ್ ಗೂ ಕೂಡ ನಾವು ಮನವಿ ಸಲ್ಲಿಸುತ್ತೇವೆ. ಸಿದ್ದರಾಮಯ್ಯ ರಾಜೀನಾಮೆಯನ್ನು ಅಂಗೀಕಾರ ಮಾಡಬಾರದು ಎಂದು ನಮ್ಮ ಪದಾಧಿಕಾರಿ ಗಳು ಕೂಡ ಒತ್ತಾಯ ಮಾಡಬೇಕು ಎಂದು ಸೂಚಿಸಿದರು.  

ಇದೇ ಸಭೆಯಲ್ಲಿ ಇತ್ತೀಚೆಗೆ ಉಪಚುನಾವಣೆಯಲ್ಲಿ ಆಯ್ಕೆಯಾದ ಶಾಸಕರಾದ ರಿಜ್ವಾನ್ ಹರ್ಷದ್ ಹಾಗೂ ಮಂಜುನಾಥ್ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ.