ಕಾಂಗ್ರೆಸ್‌ನವರು ನಕಲಿ ಗಾಂಧಿ ಹಿಂಬಾಲಕರು: ಪ್ರಹ್ಲಾದ್ ಜೋಷಿ ಟೀಕೆ

ನವದೆಹಲಿ, ಫೆ.4, ಮಹಾತ್ಮ ಗಾಂಧಿಯವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಪ್ರಸ್ತಾಪಿಸಿ ಸದನದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸದಸ್ಯರು ಧರಣಿ ನಡೆಸಿದ್ದರಿಂದ ಲೋಕಸಭೆಯಲ್ಲಿ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕಾಂಗ್ರೆಸ್‌ನವರು ನಕಲಿ ಗಾಂಧಿ ಹಿಂಬಾಲಕರು ಎಂದು ಟೀಕಿಸಿದರು.

ನಾವು ನಿಜವಾದ ಗಾಂಧಿ ಅನುಯಾಯಿಗಳು. ಅವರು ಸೋನಿಯಾ ಗಾಂಧಿಯಂತಹ ನಕಲಿ ಗಾಂಧಿಯ ಅನುಯಾಯಿಗಳು ಎಂದು ಜೋಷಿ ಗದ್ದಲದ ನಡುವೆ ಹೇಳಿದರು.ವಿಷಯ ಪ್ರಸ್ತಾಪಿಸಿದ ಸದನದ ಕಾಂಗ್ರೆಸ್ ನಾಯಕ ಚೌಧರಿ, ಮಹಾತ್ಮ ಗಾಂಧಿ ವಿರುದ್ಧ ಇಂತಹ ಹೇಳಿಕೆ ನೀಡಿದ್ದಕ್ಕಾಗಿ ಆಡಳಿತ ಪಕ್ಷದ ಮುಖಂಡ ಅನಂತ್ ಕುಮಾರ್ ಹೆಗ್ಡೆ ಅವರ ಸಂಸದರಾಗಿ ಮುಂದುವರಿಯಲು ಅರ್ಹರಲ್ಲ ಎಂದು ಹೇಳಿದರು.ಇಂದು ಈ ಜನರು ಮಹಾತ್ಮ ಗಾಂಧಿಯವರಿಗೆ ಅಗೌರವ ತೋರಿಸುತ್ತಿದ್ದಾರೆ ಎಂದು ಚೌಧರಿ ಹೇಳಿದರು. ಅವರ ಕೆಲವು ಹೇಳಿಕೆಗಳನ್ನು  ಸದನದ ದಾಖಲೆಗಳಿಂದ ತೆಗೆದುಹಾಕಲಾಯಿತು. 

ಶೂನ್ಯವೇಳೆಯಲ್ಲಿ ಕೇರಳದ ಸಂಸದರಾದ ಆರ್‌ಎಸ್‌ಪಿಯ ಎನ್. ಕೆ. ಪ್ರೇಮಚಂದ್ರನ್ ಮತ್ತು ಕಾಂಗ್ರೆಸ್ಸಿನ ಕೆ ಸುರೇಶ್ ಅವರು, ದಕ್ಷಿಣ ರಾಜ್ಯದಲ್ಲಿ ಕರೋನಾ ವೈರಸ್‌ನ ಮೂರು ಪ್ರಕರಣಗಳು ದೃಢಪಟ್ಟಿರುವ ಕಾರಣ ಸಮಸ್ಯೆಯ ಬಗ್ಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಈ ಸಂಬಂಧ ಸರ್ಕಾರ ಸದನದಲ್ಲಿ ಹೇಳಿಕೆ ನೀಡಬೇಕು ಎಂದು ಸುರೇಶ್ ಆಗ್ರಹಿಸಿದರು.ಕರೋನ ವೈರಸ್‌ ನ ಗಂಭೀರತೆಯ ಬಗ್ಗೆ ಸರ್ಕಾರಕ್ಕೆ ಅರಿವಿದೆ, ಇದರ ತಡೆಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಹೇಳಿದರು. ಈ ವಿಷಯದಲ್ಲಿ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಕೂಡ ಧ್ವನಿಗೂಡಿಸಿದರು.