ಕೊಪ್ಪಳ 10: ಮಹಿಳೆಯರ ಆತಂಕ, ತಲ್ಲಣಗಳನ್ನು ವ್ಯಕ್ತಪಡಿಸಲು ಮಹಿಳಾ ಗೋಷ್ಠಿ ಉತ್ತಮ ವೇದಿಕೆಯಾಗಿದೆ ಎಂದು ಗಂಗಾವತಿಯ ಡಾ. ಮಮತಾಜ ಬೇಗಂ ಅವರು ಹೇಳಿದರು.
ಆನೆಗೊಂದಿ ಉತ್ಸವ-2020ರ ನಿಮಿತ್ತ ಆನೆಗೊಂದಿ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಇಂದು (ಜ.10) ನಡೆದ ಮಹಿಳಾ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.
ಹೊಸತೆಲೆಮಾರಿನ ಮಹಿಳೆಯರು ತೆಲೆಯ ಹಿಂದೆ ಬಂದುಕು ಇಟ್ಟುಕೊಂಡು ಬದುಕುವ ಸ್ಥಿತಿಯಲ್ಲಿದ್ದಾರೆ. ಪ್ರಗತಿಪರ ಚಿಂತನೆಗಳ ಅಭಿವ್ಯಕ್ತಿಗೆ ಅವಕಾಶ ಇದೆ. ಮಹಿಳೆಯನ್ನು ವ್ಯಕ್ತಿ ಹಿನ್ನೆಲೆಯಲ್ಲಿ ತಂದೆ ಅಥವಾ ಪತಿಯ ಹೆಸರಿನಿಂದ ಗುರುತಿಸಲಾಗುತ್ತದೆ. ಸಾಮಾಜಿಕ ಹಿನ್ನೆಲೆಯಲ್ಲಿ ಮಹಿಳೆಯರನ್ನು ಅವರ ಹೆಸರಿನಲ್ಲಿ ಗುರುತಿಸುವಂತಾಗಬೇಕು. ಹೆಣ್ಣನ್ನು ಒಂದು ಜೀವವಾಗಿ ನೋಡುವ ಅಗತ್ಯವಿದೆ. ಸ್ತ್ರೀವಾದವೆಂದರೆ ಪುರುಷರನ್ನು ದ್ವೇಷ ಮಾಡುವುದಲ್ಲ. ಹೆಣ್ಣನ್ನು ಒಂದು ಜೀವವಾಗಿ ನೋಡುವ ಅಗತ್ಯವಿದೆ. ದೇಶದ್ಯಾಂತ ನಿರ್ಭಯಾದಂತಹ ಪ್ರಕರಣಗಳು ಮರುಕಳಿಸದಂತೆ, ಅಂತಹ ಸಂದರ್ಭಗಳು ಬಂದಾಗ ಧೈರ್ಯವಾಗಿ ಎದುರಿಸುವಂತೆ ಮಹಿಳೆಯರನ್ನು ಸಜ್ಜುಗೊಳಿಸಬೇಕು. ಕೆ.ಕೆ.ಆರ್.ಡಿ.ಬಿಯಲ್ಲಿ ಮಹಿಳಾ ಅಭಿವೃದ್ದಿಗಾಗಿ ಅವಕಾಶ ಕಲ್ಪಿಸಬೇಕು. ಶ್ರಮ ಸಂಸ್ಕೃತಿ, ಸಮ ಸಂಸ್ಕೃತಿಯಾದಾಗ ಮಾತ್ರ ಸಮಾನತೆ ಸಾಧ್ಯ ಎಂದು ಅವರು ನುಡಿದರು.
ಕೊಪ್ಪಳ ಜಿಲ್ಲೆಯ ಮಹಿಳೆಯರ ಸ್ಥಿತಿಗತಿಯ ವಿಚಾರ ಕುರಿತು ಮಾತನಾಡಿದ ಸಾವಿತ್ರಿ ಮುಜುಂದಾರ ಅವರು ಜಿಲ್ಲೆಯ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿ ಹೊಂದುತ್ತಿರುವದು ಆಶಾದಾಯಕ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ ಗಂಗಾವತಿಯ ಪ್ರಗತಿಪರ ರೈತ ಮಹಿಳೆ ವಾಣಿಶ್ರೀ, ಭಾಗ್ಯನಗರದ ಅನುರಾಧ ಗುಬ್ಬಿ, ಆನೆಗೊಂದಿಯ ಕ್ಷಮ ಪವಾರ ಇವರನ್ನು ಉಲ್ಲೇಖಿಸಿ ಜಿಲ್ಲೆಯ ಅಭಿವೃದ್ಧಿಯ ಕುರಿತು ಮಾತನಾಡಿದರು.
ಸಾಹಿತ್ಯ ಕ್ಷೇತ್ರಕ್ಕೆ ಕೊಪ್ಪಳ ಜಿಲ್ಲೆಯ ಮಹಿಳೆಯರ ಕೊಡುಗೆ ವಿಷಯ ಕುರಿತು ಮಾತನಾಡಿದ ಅರುಣಾ ನರೇಂದ್ರ ಕೊಪ್ಪಳ ಇವರು ಮಾತನಾಡಿ ಜಿಲ್ಲೆಯ ಮಹಿಳಾ ಕಲಾವಿದರು, ಕವಯತ್ರಿಗಳು, ನಾಟಕಗಾರ್ತಿಯರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಪುರಸ್ಕಾರಗಳನ್ನು ತಂದು ಕೊಟ್ಟಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರತಿಕ್ರೀಯಿಸಿದರು.
ಕಾರ್ಯಕ್ರಮದಲ್ಲಿ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿದರು. ಗ್ರಾಮ ಪಂಚಾಯತಿ ಅಧುಕ್ಷರಾದ ಅಂಜನಾದೇವಿ, ವಿಮಲಾ ಇನಾಮದಾರ್, ವಿಜಯಲಕ್ಷ್ಮೀ ಕೊಟಗಿ, ಲಕ್ಷ್ಮೀದೇವಿ, ಅರ್ಚನಾ, ಕೊಮಲಾ ಅವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ಅವರು ಸಾಗತಿಸಿದರು.