ಬಳ್ಳಾರಿ24:ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ 10 ವರ್ಷಗಳ ಕ್ರಿಯಾಯೋಜನೆ ರೂಪಿಸುವ ಕುರಿತು ಜಿಲ್ಲೆಯ ಶಾಸಕರೊಂದಿಗೆ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಮ್ಮ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದರು.
ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯಕ, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಗ್ರಾಮೀಣ ಶಾಸಕ ನಾಗೇಂದ್ರ, ಹಗರಿಬೊಮ್ಮನಳ್ಳಿ ಶಾಸಕ ಭೀಮಾನಾಯ್ಕ, ಸಂಡೂರು ಶಾಸಕ ಈ.ತುಕಾರಾಂ, ಕಂಪ್ಲಿ ಶಾಸಕ ಗಣೇಶ ಮತ್ತು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಹಾಗೂ ಜಿಪಂ ಸಿಇಒ ರಾಜೇಂದ್ರ,ಡಿಎಫ್ಒ ರಮೇಶ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೂಕ್ತ ಕ್ರಿಯಾಯೋಜನೆಯನ್ನು ತಾವು ನೀಡುವಂತೆ ಡಿಸಿ ರಾಮ್ ಪ್ರಸಾತ್ ಅವರು ಶಾಸಕರಲ್ಲಿ ಕೋರಿಕೊಂಡರು.
ಸಂಡೂರು,ಬಳ್ಳಾರಿ ಮತ್ತು ಹೊಸಪೇಟೆ ತಾಲೂಕುಗಳು ಗಣಿಗಾರಿಕೆಯಿಂದ ಬಾಧಿತವಾಗಿವೆ. ಅವುಗಳ ಅಭಿವೃದ್ಧಿಗೆ ವಿಶೇಷ ಕ್ರಿಯಾಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.
ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ಸಂಪೂರ್ಣ ಅರಿವು ತಮಗಿರುವುದರಿಂದ ತಾವು ಅತ್ಯಂತ ಸೂಕ್ತ ಹಾಗೂ ಜನರಿಗೆ ನೇರವಾಗಿ ಅನುಕೂಲವಾಗುವಂತ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಿ ಎರಡು ದಿನದೊಳಗೆ ನೀಡಿ ಎಂದು ಹೇಳಿದ ಡಿಸಿ ರಾಮ್ ಪ್ರಸಾತ್ ಅವರು, ತಾವು ನೀಡುವ ಎಲ್ಲ ಕ್ರಿಯಾಯೋಜನೆಗಳು ಹಾಗೂ ಈಗಾಗಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ವ್ಯಕ್ತವಾದ ಕ್ರಿಯಾಯೋಜನೆಗಳನ್ನು ಕ್ರೋಢೀಕರಿಸಿ ಸರಕಾರಕ್ಕೆ ಶೀಘ್ರ ಸಲ್ಲಿಸಲಾಗುವುದು ಎಂದರು.
ಶಾಸಕರು ಸುಪ್ರೀಂ ಈಗಾಗಲೇ ಸೂಚಿಸಲಾದ ವಿಷಯಗಳಿಗನುಸಾರವಾಗಿಯೇ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಸಲಹೆ-ಸೂಚನೆಗಳನ್ನು ಶಾಸಕರು ಈ ಸಂದರ್ಭದಲ್ಲಿ ನೀಡಿದರು.
ನಮ್ಮ ಕ್ಷೇತ್ರಕ್ಕೆ ಬೇಕಾದ ಅಭಿವೃದ್ಧಿ ಸಂಬಂಧಿತ ಅಂಶಗಳನ್ನು ಕ್ರಿಯಾಯೋಜನೆ ಮೂಲಕ ನೀಡುವುದಾಗಿ ಸಭೆಗೆ ತಿಳಿಸಿದರು.
ಗಣಿಬಾಧಿತ ತಾಲೂಕುಗಳಾದ ಸಂಡೂರು, ಬಳ್ಳಾರಿ, ಹೊಸಪೇಟೆ ಹೊರತುಪಡಿಸಿ ಜಿಲ್ಲೆಯ ಇನ್ನುಳಿದ ತಾಲೂಕುಗಳನ್ನು ಪ್ರತಿನಿಧಿಸುವ ಶಾಸಕರು ತಲಾ 300 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಿ ಕೊಡಿ ಎಂದು ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಅವರು ಶಾಸಕರಲ್ಲಿ ಮನವಿ ಮಾಡಿದರು.