ಸಮೀಕ್ಷಾ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ: ಡಿಸಿ ನಾಗೇಂದ್ರ ಪ್ರಸಾದ್‌.ಕೆ

ಸಮೀಕ್ಷಾ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ: ಡಿಸಿ ನಾಗೇಂದ್ರ ಪ್ರಸಾದ್‌.ಕೆ Complete the survey work quickly: DC Nagendra Prasad.K

ಬಳ್ಳಾರಿ 04: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಇನ್ನು ಮೂರು ದಿನ ಬಾಕಿ ಇದ್ದು, ನಗರ, ಸ್ಥಳೀಯ-ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಮನೆಗಳ ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅವರು ಹೇಳಿದರು. 

ಶನಿವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದ ಪ್ರಗತಿ ಸಭೆ ನಡೆಸಿ ಅವರು ಮಾತನಾಡಿದರು.ಬಳ್ಳಾರಿ ನಗರ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಇನ್ನೂ ಪ್ರಗತಿಯಾಗ ಬೇಕಿದ್ದು, ಗಣತಿದಾರರಿಗೆ ಮಾರ್ಗದರ್ಶನ ನೀಡಬೇಕು. ಹೆಚ್ಚುವರಿ ಸಿಬ್ಬಂದಿ ಅಥವಾ ಈಗಾಗಲೇ ಪೂರ್ಣಗೊಳಿಸಿರುವ ಸಿಬ್ಬಂದಿಗಳಿದ್ದಲ್ಲಿ ನೇಮಿಸಿಕೊಳ್ಳಬೇಕು ಎಂದು ನೋಡೆಲ್ ಅಧಿಕಾರಿಗಳಿಗೆ ನಿರ್ದೇಶನ  ನೀಡಿದರು. 

ಜೆಸ್ಕಾಂ ಇಲಾಖೆಯ ಮೀಟರ್ ರೀಡರ್ ಗಳು ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಕಟ್ಟಡಗಳಿಗೂ ಯುಹೆಚ್‌ಐಡಿ ಸ್ಟೀಕರ್ ಅಂಟಿಸಿದ್ದು, ಇದರಿಂದ ಗಣತಿದಾರರಿಗೆ ಸಮೀಕ್ಷಾ ಕಾರ್ಯಕ್ಕೆ ತೊಂದರೆಯಾಗಿದೆ. ಹಾಗಾಗಿ ಮೀಟರ್ ರೀಡರ್ ಗಳು ಗಣತಿದಾರರಿಗೆ ಪೂರಕ ಮನೆಗಳನ್ನು ತೋರಿಸಲು ಹಾಗೂ ಅವರ ಜೊತೆ ತೆರಳುವಂತೆಯೂ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. 

ಇದೇ ವೇಳೆ ತಾಲ್ಲೂಕುವಾರು ನೇಮಿಸಿದ ನೋಡೆಲ್ ಅಧಿಕಾರಿಗಳಿಂದ ಆಯಾ ಸ್ಥಳೀಯ-ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿಯಿರುವ ಮನೆಗಳ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಯವರು, ಇರುವ ಕಾಲಾವಧಿಯಲ್ಲಿ ತ್ವರಿತವಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್‌.ಝುಬೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಸಹಾಯಕ ಆಯುಕ್ತ ಪಿ.ಪ್ರಮೋದ್, ಡಿಎಂಎಫ್ ವಿಶೇಷಾಧಿಕಾರಿ ಲೋಕೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಜೆಸ್ಕಾಂ  ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

ಅ.13 ರಂದು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಬಳ್ಳಾರಿ 04: ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ “ದಿಶಾ” ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆಯನ್ನು ಅ.13 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆಸಲು ನಿಗದಿಪಡಿಸಲಾಗಿದೆ. 

ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರೂ ಆದ ಈ.ತುಕಾರಾಮ್ ಅವರು ಸಭೆಯ ಅಧ್ಯಕ್ಷತೆ ವಹಿಸುವರು.ಸಭೆಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಅಗತ್ಯಪೂರ್ಣ ಮಾಹಿತಿಯೊಂದಿಗೆ ತಪ್ಪದೇ ಹಾಜರಾಗಬೇಕು.*ಅಹವಾಲು ಸ್ವೀಕಾರ:* 

ಅ.13 ರಂದು ಬೆಳಿಗ್ಗೆ 09.30 ಗಂಟೆಗೆ ನಗರದ ಕೋಟೆ ಪ್ರದೇಶದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಹಾಗೂ ಇತರೆ ಯೋಜನೆಗಳ ಕುರಿತಂತೆ ಸಂಸದ ಈ.ತುಕಾರಾಮ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಅಧಿಕಾರಿಗಳು ತಪ್ಪದೇ ಹಾಜರಿರಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ತಿಳಿಸಿದ್ದಾರೆ.10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನಬಳ್ಳಾರಿ 04: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ  ಇಲಾಖೆ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್) ವತಿಯಿಂದ ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಚಿಸುವವರಿಗಾಗಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. 

ತರಬೇತಿಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ಸ್ವಂತ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಹಾಗೂ ಉದ್ಯಮ ನಿರ್ವಹಣೆ, ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ.ಅಭ್ಯರ್ಥಿಗಳು 18 ವರ್ಷ ದಿಂದ 45 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಓದಲು/ಬರೆಯಲು ಬರುತ್ತಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳೆಯರಿಗೆ ಮಾತ್ರ.  

ಅರ್ಜಿಯನ್ನು ನಗರದ ಹೊಸಪೇಟೆ ರಸ್ತೆಯ ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡದ ಸಿಡಾಕ್ ನ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪಡೆದುಕೊಳ್ಳಬಹುದು ಅಥವಾ ಮೊ.9449226221, 7483538942 ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸಿಡಾಕ್ ನ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಾಕಿ ತರಬೇತುದಾರರ ಆಯ್ಕೆ: ಅರ್ಜಿ ಆಹ್ವಾನಬಳ್ಳಾರಿ 04: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯ ಹಾಕಿ ಖೇಲೋ ಇಂಡಿಯಾ ಕೇಂದ್ರಕ್ಕೆ ಹಾಕಿ ತರಬೇತುದಾರರ ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 

ಕೇಂದ್ರ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ ಸಣ್ಣ ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ರಾಷ್ಟ್ರ ಮಟ್ಟದ ಹಾಕಿ ಕ್ರೀಡಾಪಟುಗಳು ಎನ್‌.ಐ.ಎಸ್‌. ಡಿಪ್ಲೊಮಾ ಇನ್ ಹಾಕಿ ಅಥವಾ ಎಂಪೇಡ್  ಹಾಕಿ ಆಟದಲ್ಲಿ ವಿಶೇಷತೆ ಮತ್ತು ರಾಷ್ಟ್ರೀಯ ಪದಕ ವಿಜೇತ, ರಾಜ್ಯ ಪದಕ ವಿಜೇತ, ರಾಷ್ಟ್ರೀಯ ಮಟ್ಟದಲ್ಲಿ ಪ್ರಾತಿನಿಧ್ಯ ವಹಿಸಿದ ರಾಜ್ಯದವರು ಅರ್ಹರಾಗುತ್ತಾರೆ. 

ಆಸಕ್ತ ಹಾಕಿ ತರಬೇತುದಾರರು ಅರ್ಜಿಗಳನ್ನು ಅಕ್ಟೋಬರ್ 15 ರೊಳಗಾಗಿ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ನಗರದ ನಲ್ಲಚೇರುವು ಪ್ರದೇಶದ ಜಿಲ್ಲಾ ಕ್ರೀಡಾಂಗಣದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.