ನೆರೆಹಾನಿ ಕಾಮಗಾರಿ ಆದ್ಯತೆ ಮೇಲೆ ಪೂರ್ಣಗೊಳಿಸಿ: ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಖತ್ರಿ

ಗದಗ 16: ಗದಗ ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೊಳಗಾದ ಶಾಲಾ ಕೊಠಡಿ, ರಸ್ತೆ, ಸೇತುವೆಗಳ ದುರಸ್ತಿ ಹಾಗೂ ಹೊಸದಾಗಿ ನಿರ್ಮಾಣ ಮಾಡಬೇಕಾದ ಕಾಮಗಾರಿಗಳನ್ನು ಆದ್ಯತೆಯ ಪೂರ್ಣಗೊಳಿಸಲು ಅಪರ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ  ಡಾ. ರಾಜಕುಮಾರ್  ಖತ್ರಿ ನಿರ್ದೇಶನ ನೀಡಿದರು. 

ನರಗುಂದ ತಹಶೀಲ್ದಾರ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ  ನೆರೆ ಹಾನಿ ಕಾಮಗಾರಿ, ಪರಿಹಾರ ವಿತರಣೆ ಕುರಿತಂತೆ  ಪರಿಶೀಲಿಸಿ ಅವರು ಮಾತನಾಡಿದರು.  ಸಂಬಂಧಿಸಿದ ಇಲಾಖೆ ಹಾಗೂ ಏಜೆನ್ಸಿಗಳು ಕ್ರಿಯಾಯೋಜನೆ ಅನುಮೋದನೆಗೊಂಡ ಕಾಮಗಾರಿಗಳ ಟೆಂಡರ್ ಕರೆದ ಹಾಗೂ ಕಾಮಗಾರಿ ಪೂರ್ಣಗೊಳಿಸುವ ಅವಧಿ ವಿವರಗಳು ಇರುವ ವರದಿಯನ್ನು ಶೀಘ್ರವೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು  ಡಾ. ರಾಜ್ ಕುಮಾರ್ ಖತ್ರಿ ಸೂಚನೆ ನೀಡಿದರು.  

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ ನೆರೆಯಿಂದಾಗಿ ಹಾನಿಗೊಳಗಾದ ಎ ಮತ್ತು ಬಿ ಕೆಟಗರಿಯ 1284 ಫಲಾನುಭವಿಗಳಿಗೆ ತಲಾ  ಒಂದು ಲಕ್ಷ  ರೂ ಮೊದಲ ಹಂತದ ಅನುದಾನ ವಿತರಿಸಿದ್ದು ಆ ಪೈಕಿ 59 ಮನೆಗಳ ಅಡಿಪಾಯ ಪೂರ್ಣಗೊಂಡಿದೆ.  ಹಾಗೂ 1604 ಸಿ ಕೆಟಗರಿಯ ಮನೆಗಳಿಗೆ ತಹಶೀಲ್ದಾರರು ಪರಿಹಾರ ವಿತರಿಸಲಾಗುತ್ತಿದೆ.  ಬಿ ಕೆಟಗರಿಯ ಮನೆಗಳಿಗೆ ಮುಂದಿನ ಹಂತದ ಪರಿಹಾರ ಬಿಡುಗಡೆಗೆ ಪೂರ್ಣ ಹಾನಿಗೊಳಗಾಗದೆ ಇರುವುದರಿಂದ ಕೆಲವೊಂದು ತಾಂತ್ರಿಕ ಅಂಶಗಳು ಅಡ್ಡಿ ಬರುತ್ತಿರುವ ಕುರಿತು ಅಪರ ಮುಖ್ಯ ಕಾರ್ಯದಶರ್ಿಗಳ ಗಮನ ಸೆಳೆದರು. ಲೋಕೋಪಯೋಗಿ ಇಲಾಖೆಗೆ 10 ಕೋಟಿ ರೂ. ಬಿಡುಗಡೆಯಾಗಿದ್ದು 71 ಕಾಮಗಾರಿಗಳು ಚಾಲ್ತಿಯಲ್ಲಿದ್ದು 4 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದಿದೆ.  ಗ್ರಾಮೀಣ ನೀರು ನೈರ್ಮಲ್ಯ ಇಲಾಖೆಗೆ 117 ಕಾಮಗಾರಿಗಳಲ್ಲಿ 38.5 ಕೋಟಿ ಅನುದಾನ ಅಗತ್ಯವಿದ್ದು 4.6 ಕೋಟಿ ರೂ. ವೆಚ್ಚದ ಕಾಮಗಾರಿ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಗಮಕ್ಕೆ 5 ಕೋಟಿ ರೂ. ಅನುದಾನವನ್ನು ಸಕರ್ಾರ ಬಿಡುಗಡೆ  ಮಾಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, 289 ಶಾಲಾ ಕೊಠಡಿಗಳ ಪೈಕಿ 150 ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿ ಪ್ರಾರಂಭಗೊಂಡಿದೆ.  ಇದಕ್ಕಾಗಿ ಶಿಕ್ಷಣ ಇಲಾಖೆಗೆ 10 ಕೋಟಿ ರೂ.ಗಳನ್ನು ನೀಡಲಾಗಿದ್ದು ನಿರ್ಮಾಣ ಕಾಮಗಾರಿ ಆಯಾ ಶಾಲೆಗಳ ಅಭಿವೃದ್ಧಿ ಸಮಿತಿಗಳಿಗೆ ಹೊಣೆ ನೀಡಿದ್ದು ಸಾರ್ವಜನಿಕ  ಶಿಕ್ಷಣ ಇಲಖೆ ಉಪನಿರ್ದೇಶಕರು ನೋಡಲ್ ಅಧಿಕಾರಿಯಾಗಿದ್ದಾರೆ ಎಂದರು.  

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನರಗುಂದ ತಹಶೀಲ್ದಾರ ಎ.ಎಸ್. ಮಹೇಂದ್ರ, ರೋಣ ತಹಶೀಲ್ದಾರ ಜಕ್ಕಪ್ಪಗೌಡ್ರ, ಗದಗ  ತಹಶೀಲ್ದಾರ ಶ್ರೀನಿವಾಸಮೂರ್ತಿ  ಕುಲಕರ್ಣಿ ಹಾಗೂ ವಿವಿಧ ಇಲಾಖೆ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ  ಭಾಗವಹಿಸಿದ್ದರು.