ಕಂಪ್ಲಿ 15 : ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಫೆ.10ರಿಂದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆರಂಭವಾಗಿ ಗ್ರಾಮಾಡಳಿತಾಧಿಕಾರಿಗಳ ಮುಷ್ಕರ ಆರನೇ ದಿನವನ್ನು ಪೂರೈಸಿದ್ದು, ಗ್ರಾಮಾಡಳಿತ ಸಂಪೂರ್ಣವಾಗಿ ಬಂದ್ ಆಗಿದೆ. ರೈತರು, ವಿದ್ಯಾರ್ಥಿಗಳು, ವಿವಿಧ ವೇತನಗಳಿಗಾಗಿ ಅರ್ಜಿ ಹಾಕುವವರು, ವಿವಿಧ ಪ್ರಮಾಣ ಪತ್ರಗಳು ಬೇಕಾದವರು ಸೇರಿದಂತೆ ಸಾರ್ವಜನಿಕರಿಗೆ ತೀವ್ರವಾದ ತೊಂದರೆಯಾಗಿದೆ ಆದರೆ ಸರ್ಕಾರ ಮಾತ್ರ ಮೂರು ದಿನಗಳು ಕಳೆದರೂ ಗ್ರಾಮಾಡಳಿತಾಧಿಕಾರಿಗಳ ಸಮಸ್ಯೆ, ಮುಷ್ಕರದ ಬಗ್ಗೆ ಗಮನ ಹರಿಸದಿರುವುದು ಸಾರ್ವಜನಿಕರಲ್ಲಿ ಅಸಮಧಾನವನ್ನು ತಂದಿದೆ.
ಗ್ರಾಮಾಡಳಿತಾಧಿಕಾರಿಗಳ ಮುಷ್ಕರದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಜಾತಿ,ಆದಾಯ, ಜನನ-ಮರಣ ಪ್ರಮಾಣ ಪತ್ರಗಳ ಸೇವೆ ಸೇರಿದಂತೆ ಇತರೆ ಸೇವೆಗಳಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು, ರೈತರು ತಮ್ಮ ಕೆಲಸ ಕಾರ್ಯಗಳಿಗಾಗಿ ಗ್ರಾಮಗಳಲ್ಲಿನ ಅವರ ಕಚೇರಿಗೆ ತೆರಳಿ ಅಲ್ಲಿ ಬೀಗ ಹಾಕಿರುವುದನ್ನು ನೋಡಿ ತಹಸಿಲ್ದಾರ್ ಹಾಗೂ ನಾಡಕಚೇರಿಗಳಿಗೆ ಎಡತಾಕುತ್ತಿದ್ದಾರೆ. ಆದರೆ ಅಲ್ಲಿ ಗ್ರಾಮಾಡಳಿತಾಧಿಕಾರಿಗಳು ಮುಷ್ಕರ ನಡೆಸುತ್ತಿರುವುದನ್ನು ನೋಡಿ ತಮ್ಮ ಊರುಗಳಿಗೆ ಬಂದ ದಾರಿ ಸುಂಕವಿಲ್ಲವೆಂದು ಹಿಂತಿರುಗುತ್ತಿದ್ದು, ಇನ್ನು ಎಷ್ಟು ದಿನ ಇವರ ಮುಷ್ಕರ ಎಂದು ಪ್ರಶ್ನಿಸುತ್ತಿದ್ದಾರೆ. ಆರನೇ ದಿನ ಮುಷ್ಕರದ ಸಂದರ್ಭದಲ್ಲಿ ಮಾತನಾಡಿದ ಕಂಪ್ಲಿ ತಾಲ್ಲೂಕು ಗ್ರಾಮಾಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಎಚ್.ವಿ.ಮಂಜುನಾಥ್ ಈಗಾಗಲೇ ನಮ್ಮ ನ್ಯಾಯುತ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ, ಆದರೂ ಸರ್ಕಾರವಾಗಲಿ, ಮುಖ್ಯಮಂತ್ರಿಗಳಾಗಲಿ, ಕಂದಾಯ ಸಚಿವರಾಗಲಿ ನಮ್ಮ ಮುಷ್ಕರದ ಬಗ್ಗೆ ಗಮನ ಹರಿಸದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದರ ಮಧ್ಯೆ ಹುಬ್ಬಳ್ಳಿಯಲ್ಲಿ ಮುಷ್ಕರ ನಡೆಸುತ್ತಿದ್ದ ನಮ್ಮ ಸಹೋದ್ಯೋಗಿ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯ್ಕ್ ಅವರನ್ನು ಅಮಾನತ್ತು ಮಾಡುವ ಮೂಲಕ ನಮ್ಮ ಮುಷ್ಕರವನ್ನು ತುಳಿಯುವ ಪ್ರಯತ್ನವನ್ನು ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ, ಅವರ ಅಮಾನತ್ತನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿದ ಅವರು ನಮ್ಮ ಮುಷ್ಕರ ಬೇಡಿಕೆ ಈಡೇರುವವರೆಗೂ ನಡೆಯಲಿದೆ ಎಂದು ಸ್ಪಷ್ಟ ಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಡಳಿತಾಧಿಕಾರಿಗಳಾದ ಕೆ.ಎಂ.ಶಿವರುದ್ರಯ್ಯ, ವಿ.ವೆಂಕಟೇಶ್, ನಾರನಗೌಡ್ರು ಕಾಂತರಾಜ್,ಕೆ.ರಾಘವೇಂದ್ರ, ಯು.ವನಿತಾಕುಮಾರಿ, ಕುರುಬರ ಮಂಜುನಾಥ್, ಕರೇಗೌಡ್ರು ಸುರೇಶ್, ವಮ್ಮಾರಿ ರಮೇಶ್, ಕಂಕ್ರಿ ಚನ್ನಕೇಶವ, ಗೀರೀಶ್ ಬಾಬು ಟಿ, ಲಕ್ಷ್ಮಣ ನಾಯಕ್ ಜೆ.ಎಂ.,ಅಬ್ದುಲ್ ಖಾದರ್ ನಿಯಾಜಿ, ರೂಪಿಣಿ ಕೆ.ಎಂ.,ಕೆ.ಜಿಲಾನಿ,ಮನೋಜ್‌ಕುಮಾರ್.ಎಸ್., ಬಿ.ಜ್ಯೋತೆಪ್ಪ, ಮಹಮ್ಮದ್‌ರಬ್,ಕುಸುಮಾ ಎನ್. ಸೇರಿದಂತೆ ಇತರರು ಭಾಗವಹಿಸಿದ್ದರು.