ಎಸ್.ಸಿ.ಎಸ್.ಪಿ., ಟಿ.ಎಸ್.ಪಿ ಯೋಜನೆ ಭೌತಿಕ ಗುರಿ ಪೂರ್ಣಗೊಳಿಸಿ - ನಲಿನ್ ಅತುಲ್
ಕೊಪ್ಪಳ 21: ಎಸ್.ಸಿ.ಎಸ್.ಪಿ-ಟಿ.ಎಸ್.ಪಿ ಯೋಜನೆಯಡಿ ಪ್ರಸಕ್ತ ಸಾಲಿನ ಕೊಪ್ಪಳ ಜಿಲ್ಲೆಯ ಭೌತಿಕ ಗುರಿಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ 2013ರನ್ವಯ ಅನುಸೂಚಿತ ಜಾತಿಗಳು ಉಪಯೋಜನೆ, ಬುಡಕಟ್ಟು ಉಪಯೋಜನೆ ಹಾಗೂ ಪರಿಶಿಷ್ಟ ಜಾತಿ, ವರ್ಗದ ಅಭಿವೃದ್ಧಿ ಕಾರ್ಯಕ್ರಮಗಳ ಡಿಸೆಂಬರ್-2024 ಮತ್ತು ಜನವರಿ-2025ರ ಪ್ರಗತಿ ಪರೀಶೀಲನೆಯ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಎಲ್ಲಾ ಇಲಾಖೆಗಳು, ನಿಗಮಗಳಿಗೆ ಎಸ್.ಸಿ.ಎಸ್.ಪಿ-ಟಿ.ಎಸ್.ಪಿ. ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡಿ, ಗುರಿ ನಿಗದಿಪಡಿಸಿದೆ. ಅದರಂತೆ ಪ್ರಸಕ್ತ ಸಾಲಿನ ತಮ್ಮ ಕಚೇರಿಗಳಿಗೆ ನಿಗದಿಪಡಿಸಿರುವ ಭೌತಿಕ ಗುರಿಯನ್ವಯ ಪ್ರಗತಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ನಿಗದಿತ ಗುರಿಗಿಂತ ಕಡಿಮೆ ಪ್ರಗತಿ ಅಥವಾ ಶೇ. 100 ರಷ್ಟು ಪ್ರಗತಿ ಸಾಧನೆ ಅಸಾಧ್ಯವಿದ್ದರೆ, ಅಂತಹ ಸಂಬಂಧಪಟ್ಟ ಇಲಾಖೆಗಳು ಮಾಹಿತಿ ನೀಡಬೇಕು. ಕೃಷಿ, ತೋಟಗಾರಿಕೆ, ಪಶುಪಾಲನೆ, ರೇಷ್ಮೆ, ಪ್ರವಾಸೋದ್ಯಮ ಹಾಗೂ ವಿವಿಧ ಇಲಾಖೆಗಳು, ನಿಯಮಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ನೀಡಲಾಗುವ ಸರ್ಕಾರದ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ನೀಡಬೇಕು. ಸರ್ಕಾರ ನೀಡುವ ಅನುದಾನ ಬಿಡುಗಡೆಯಾದ ದಿನಾಂಕ, ಫಲಾನುಭವಿಗಳಿಗೆ ತಲುಪಿಸಿದ ದಿನಾಂಕ, ಖರ್ಚಾದ ಮೊತ್ತ, ಬಾಕಿ ಉಳಿದಿರುವ ಅನುದಾನವನ್ನು ಕಾರಣ ಸಹಿತ ಮಾಹಿತಿಯನ್ನು ನೀಡಿ. ಎಸ್.ಸಿ.ಎಸ್.ಪಿ-ಟಿ.ಎಸ್.ಪಿ ಯೋಜನೆಯಡಿ ವಿವಿಧ ಅನುಷ್ಠಾನ ಏಜೆನ್ಸಿಗಳ ಮೂಲಕ ನಿರ್ಮಿಸುತ್ತಿರುವ ಕಟ್ಟಡಗಳು, ಭವನಗಳ ಕುರಿತು ಸಹ ಸೂಕ್ತ ಮಾಹಿತಿ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಅವರು ಮಾತನಾಡಿ, ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಪ್ರತಿ ಮಾಹೆಯಲ್ಲಿ ಇಲಾಖಾವಾರು ಪ್ರಗತಿ ಸಾಧಿಸಿದ ವರದಿಯನ್ನು ನಿಗದಿತ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಭರ್ತಿಮಾಡಿ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟಪ್ಪನವರ್, ಪಶು ಇಲಾಖೆ ಉಪನಿರ್ದೇಶಕ ಡಾ ಪಿ.ಎಂ.ಮಲ್ಲಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾ.ಪಂ ಇಒಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.