ನವದೆಹಲಿ, ಆಗಸ್ಟ್ 25 ಮುಂಬರುವ ಅ.2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜಯಂತಿಯನ್ನು ದೇಶ ಆಚರಿಸಲಿದ್ದು, ಸಮುದಾಯ ಕ್ರೋಢಿಕರಣವು ನಮ್ಮ ಧ್ಯೇಯವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ. ತಮ್ಮ ಮಾಸಿಕ ಜನಪ್ರಿಯ ಆಕಾಶವಾಣಿಯ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ ಬೃಹತ್ ಉತ್ಸವಕ್ಕೆ ಸಿದ್ಧತೆ ನಡೆಸುತ್ತಿದೆ ಮತ್ತು ಇಡಿ ವಿಶ್ವ ಈ ಬಗ್ಗೆ ಮಾತನಾಡುತ್ತಿದೆ. ಸೇವಾ ಮನೋಭಾವವು ಮಹಾತ್ಮ ಗಾಂಧಿಯವರ ಜೀವನದ ಅವಿಭಾಜ್ಯ ಅಂಗವಾಗಿತ್ತು ಎಂದರು. ಮಹಾತ್ಮ ಗಾಂಧಿಯವರಿಗೆ ಸತ್ಯ ಮತ್ತು ಸೇವೆಯೊಂದಿಗೆ ವಿಶೇಷ ನಂಟಿದೆ. ಈ ವರ್ಷ ಸೆಪ್ಟೆಂಬರ್ 11ರಿಂದ 'ಸ್ವಚ್ತಾ ಹೈ ಸೇವಾ' ಪಾಕ್ಷಿಕ ಕಾರ್ಯಕ್ರಮ ಆಚರಿಸಲಾಗುವುದು ಎಂದು ಪ್ರಧಾನಿ ಘೋಷಿಸಿದರು. ತಮ್ಮ 'ಮನ್ ಕಿ ಬಾತ್' ನಲ್ಲಿ ಪ್ರಧಾನಿ, ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಕರೆ ನೀಡಿರುವ ಅವರು, ಬಯಲು ಶೌಚ ಮುಕ್ತ ಭಾರತದೊಂದಿಗೆ, ಭಾರತವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ನಾವು ಬೃಹತ್ ಜನಾಂದೋಲನವನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ಭಾರತವನ್ನು ಪ್ಲಾಸ್ಟಿಕ್ನಿಂದ ಮುಕ್ತಗೊಳಿಸುವ ಮೂಲಕ ಈ ವರ್ಷದ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಅವರು ಎಲ್ಲರಿಗೂ ಕರೆ ನೀಡಿದರು.