ಲೋಕದರ್ಶನ ವರದಿ
ನಿರಂತರವಾಗಿ ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಲು ಮುಂದಾಗಿ
ಕಂಪ್ಲಿ 20: ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಕಲಿಕಾ ಹಬ್ಬ ಉತ್ತಮ ವೇದಿಕೆ ಎಂದು ಗ್ರಾಪಂ ಅಧ್ಯಕ್ಷ ಎ.ವೆಂಕಟರಮಣಯ್ಯ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ ಗುರುವಾರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಠ್ಯದ ಜತೆಗೆ ಪತ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರಂತರವಾಗಿ ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕಲಿಕಾ ಹಬ್ಬವು ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ. ಎಂದರು.ಮುಖ್ಯಗುರು ಚಂದ್ರಯ್ಯ ಸೊಪ್ಪಿನಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
ಶಾಲೆಗಳಲ್ಲಿ ಆಯೋಜಿಸುವ ಕಲಿಕಾ ಹಬ್ಬ ಕಾರ್ಯಕ್ರಮ ಮಕ್ಕಳಲ್ಲಿ ಶೈಕ್ಷಣಿಕ ಬಲವರ್ಧನೆ ಹಾಗೂ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ವೃದ್ಧಿಸುತ್ತದೆ. ಇದಲ್ಲದೆ ಮಕ್ಕಳ ಪ್ರತಿಭೆ ಗುರುತಿಸಲು ಸೂಕ್ತ ವೇದಿಕೆ ಕಲ್ಪಿಸುತ್ತದೆ. ಇಂತಹ ಕಾರ್ಯಕ್ರಮಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಕಲಿಕ ಹಬ್ಬದಲ್ಲಿ ಗಟ್ಟಿ ಓದು, ಸುಂದರ ಕೈಬರಹ, ಸ್ಮರಣೆ ಶಕ್ತಿ, ಮೋಜಿನ ಗಣಿತ, ಕಥೆ ಹೇಳುವುದು, ಪೋಷಕ ಸಹ ಸಂಬಂಧದ ವಲಯ, ರಸ ಪ್ರಶ್ನೆ, ಹೀಗೆ 7 ಸ್ಪರ್ಧೆಗಳು ಜರುಗಿದವು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಂ.ತೋಟಪ್ಪ, ಇಸಿಒ ರೇವಣ್ಣ, ಸಾವಿತ್ರಿಬಾಯಿ ಪುಲೆ ಅಧ್ಯಕ್ಷೆ ಸುನಿತಾ ಪೂಜಾರಿ, ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗನಗೌಡ ಎಂ.ಎ, ಸಿಆರ್‌ಪಿ ರೇಣುಕಾರಾಧ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ರಾಜೇಶ್ವರಿ, ಮುಖಂಡ ದಾದಾ ಖಲಂದರ್, ಪಂಪಾನಗೌಡ, ಕೆ.ಮಾಬುಸುಭಾನಿ ಸೇರಿದಂತೆ 10 ಶಾಲೆಗಳ ಮಕ್ಕಳು ಭಾಗವಹಿಸಿದ್ದರು.