ಸಿಎಎ ಕುರಿತ ಮುಕ್ತ ಚರ್ಚೆಗೆ ಬರಲಿ: ಕೇಂದ್ರ ಸರ್ಕಾರಕ್ಕೆ ಉಗ್ರಪ್ಪ ಸವಾಲು

ಬೆಂಗಳೂರು,  ಜ. 19 :     ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ  ಅವರನ್ನು ಹೋಲಿಸಿ ಇತಿಹಾಸ ತಜ್ಞ ರಾಮಚಂದ್ರಾ ಗುಹಾ ಮಾತನಾಡಿರುವುದು ಸರಿಯಲ್ಲ ಎಂದು  ಮಾಜಿ ಸಂಸದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಕೆಪಿಸಿಸಿ  ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಚಂದ್ರ ಗುಹಾ ಅವರೇ ದೇಶಕ್ಕಾಗಿ  ತ್ಯಾಗ ಬಲಿದಾನ ಮಾಡಿದ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಬಾರದು. ಮೋದಿಯಂತೆ  ರಾಹುಲ್ಗಾಂಧಿ ಲಕ್ಷಾಂತರ ರೂಪಾಯಿ ಮೊತ್ತದ ಬಟ್ಟೆ ಧರಿಸುವುದಿಲ್ಲ. ಅವರಂತೆ ರಾಹುಲ್  ಗಾಂಧಿ ಸುಳ್ಳು ಹೇಳುವುದಿಲ್ಲ. ರಾಹುಲ್ ಗಾಂಧಿ ಒಂದು ವ್ಯಕ್ತಿಯಲ್ಲ, ಕಾಂಗ್ರೆಸ್ನ ಶಕ್ತಿ  ಎಂದು ತಿರುಗೇಟು ನೀಡಿದರು.

ಬೆಂಗಳೂರು, ಹುಬ್ಬಳ್ಳಿಗೆ ಅಮಿತ್ ಶಾ ಬಂದು  ಹೋದರಷ್ಟೆ. ರಾಜ್ಯದ ಸಮಸ್ಯೆಗಳ ಬಗ್ಗೆ ಅಮಿತ್ ಶಾ ಮಾತನಾಡಲೇ ಇಲ್ಲ. ಜಿಎಸ್  ಟಿ ಹಣವನ್ನು ರಾಜ್ಯಕ್ಕೆ ನೀಡುವ ಬಗ್ಗೆಯಾಗಲೀ, ಸಂಪುಟ ರಚನೆ ವಿಚಾರದ ಬಗ್ಗೆಯಾಗಲೀ ಶಾ  ಮಾತನಾಡಲಿಲ್ಲ ಎಂದರು.

ಯಾರು ಏನೇ ಹೇಳಿದರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ  ಅಂಗ. ಮಹಾರಾಷ್ಟ್ರದ ಯಾವುದೇ ಜನ ಏನೇ ಮಾತಾಡಿದರೂ ಅದು ಮುಗಿದು ಹೋದ ಅಧ್ಯಾಯ. ಈ ಬಗ್ಗೆ  ಮಾತಾಡುವುದನ್ನು ಮಹಾರಾಷ್ಟ್ರ ಮುಖಂಡರು ನಿಲ್ಲಿಸಲಿ ಎಂದು ಆಗ್ರಹಿಸಿದರು.

ಅಮಿತ್ ಶಾ  ಅವರಿಗೆ ನಿಜವಾಗಿಯೂ ಶಕ್ತಿ ಇರುವುದೇ ಆದಲ್ಲಿ ಪ್ರಧಾನಿಯಾಗಲೀ ಸಂಸದ ಪ್ರಹ್ಲಾದ್  ಜೋಶಿ ಸೇರಿದಂತೆ ಬಿಜೆಪಿಯಿಂದ ಯಾರಾದರಾಗಲೀ ಸಿಎಎ ಕುರಿತ ಮುಕ್ತ ಚರ್ಚೆಗೆ ಬರಲಿ ಎಂದು  ಸವಾಲು ಹಾಕಿದರು.