ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶ ಶೇಖರಣೆಗೆ ಸಮೀಕ್ಷೆ ಕಾರ್ಯ
ವಿಜಯಪುರ ಏ. 28: ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶಗಳನ್ನು ಶೇಖರಿಸಲು ಜಿಲ್ಲೆಯಾದ್ಯಂತ ಮೇ.5ರಿಂದ 17ರವರೆಗೆ 12 ದಿನಗಳ ಕಾಲ ಕೈಗೊಂಡಿರುವ ಸಮೀಕ್ಷಾ ಕಾರ್ಯವನ್ನು ಅತ್ಯಂತ ಪಾರದರ್ಶಕ ಹಾಗೂ ನಿಯಮಗಳನ್ವಯ ನಡೆಸುವಂತೆ ನಿಯೋಜಿತ ಮಾಸ್ಟರ್ ಟ್ರೇನರ್‌ಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸೋಮವಾರ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್‌ರವರ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ಕಾರ್ಯಕ್ಕೆ ನಿಯೋಜಿತಗೊಂಡ ತಾಲೂಕಿನ ಮಾಸ್ಟರ್ ಟ್ರೇನ್‌ರ್‌ಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯ ಜನರ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸುವ ಕಾರ್ಯ ಸಮಾಜ ಕಲ್ಯಾಣ ಇಲಾಖೆಯಡಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ವಿಧಾನಸಭಾ ಮತಕ್ಷೇತ್ರಗಳ ಮತಗಟ್ಟೆಗಳಲ್ಲಿ ದಿನಾಂಕ : 05-05-2025ರಿಂದ 17-5-2025ರವರೆಗೆ ಗಣತಿದಾರರು ಪರಿಶಿಷ್ಟ ಜಾತಿಯ ಪ್ರತಿ ಮನೆ-ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರ ಏಕ ಸದಸ್ಯ ವಿಚಾರಣ ಆಯೋಗವನ್ನು ರಚಿಸಲಾಗಿದ್ದು, ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಮೂರು ಹಂತದ ಸಮೀಕ್ಷಾ ಕಾರ್ಯ ರೂಪಿಸಲಾಗಿದೆ. ಮೇ.5ರಿಂದ 17ರವರೆಗೆ ಗಣತಿದಾರರು ಪರಿಶಿಷ್ಟ ಜಾತಿಯ ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ಕೈಗೊಂಡು, ನಿಖರವಾದ ಮಾಹಿತಿ ಪಡೆದು, ಸಮಾಜ ಕಲ್ಯಾಣ ಇಲಾಖೆಯಿಂದ ಅಭಿವೃದ್ದಿಪಡಿಸಲಾದ ಆಪ್ ಮೂಲಕ ದತ್ತಾಂಶವನ್ನು ದಾಖಲಿಸಬೇಕು. ಅದರಂತೆ ಮೇ.19ರಿಂದ 21 ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳ ಮೂಲಕ ಸಮೀಕ್ಷೆ ಕೈಗೊಳ್ಳುವುದು ಹಾಗೂ ಮೂರನೇ ಹಂತದ ಸಮೀಕ್ಷೆ ಕಾರ್ಯ ಮೇ.19ರಿಂದ 23ರವರೆಗೆ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಸಮೀಕ್ಷೆಯಿಂದ ಹೊರುಗಳಿದ, ಕೈಬಿಟ್ಟು ಹೋದ ಪರಿಶಿಷ್ಟ ಜನರು ಸ್ವಯಂವಾಗಿ ಆನ್‌ಲೈನ್ ಮೂಲಕ ದತ್ತಾಂಶವನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ಜರುಗಿಸಲು ಮೇಲ್ವಿಚಾರಣೆ, ನಿಗಾ ವಹಿಸಲು ಸಮಿತಿಗಳನ್ನು ರಚಿಸಲಾಗಿದೆ. ಸಮೀಕ್ಷೆ ಮೇಲ್ವಿಚಾರಣೆ ಹಾಗೂ ಗಣತಿಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರನ್ನು ನೇಮಿಸಿ ಆದೇಶಿಸಲಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯತಿ ಅಭಿವೃದ್ದಿ ಆಧಿಕಾರಿಗಳನ್ನು ಸಮೀಕ್ಷೆ ಮೇಲ್ವಿಚಾರಣೆಗೆ ಕಾರ್ಯನಿರ್ವಾಹಕ ಅಧಿಕಾರಿಗಳು ನೇಮಕ ಮಾಡಿ ಆದೇಶಿಸಲಾಗಿದೆ. ಪ್ರತಿ ತಾಲೂಕಿಗೆ 5 ಜನರಂತೆ ತಾಲೂಕಾ ಮಟ್ಟದ ಮಾಸ್ಟರ್ ಟ್ರೇನರ್‌ಗಳನ್ನು ಗುರುತಿಸಿ ನೇಮಕ ಮಾಡಲಾಗಿದೆ. ಪ್ರತಿ 10 ರಿಂದ 12 ಗಣತಿದಾರರಿಗೆ ಓರ್ವರಂತೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ಮಾಸ್ಟರ್ ಟ್ರೇನರ್‌ಗಳಿಗಾಗಿ ಇಂದು ಆಯೋಜಿಸಿದ ತರಬೇತಿಯನ್ನು ಪಡೆದುಕೊಂಡು ನಿಖರ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಸಮೀಕ್ಷೆ ಕಾರ್ಯಕ್ಕೆ ಇರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು. ತರಬೇತಿಯಲ್ಲಿ ನಿಖರ ಮಾಹಿತಿ ಪಡೆದುಕೊಂಡು, ಈ ಕಾರ್ಯಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಕೈಗೊಂಡು ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಮನೆ-ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸಬೇಕು. ಯಾವುದೇ ಪರಿಶಿಷ್ಟ ಜಾತಿ ಕುಟುಂಬ ಈ ಸಮೀಕ್ಷೆಯಿಂದ ಕೈ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ, ಪಾರದರ್ಶಕವಾಗಿ ದೋಷಮುಕ್ತ ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಆಯೋಜಿಸಲಾದ ತರಬೇತಿ ಕಾರ್ಯಕ್ರಮದಲ್ಲಿ ನಿಯೋಜಿತ ಮಾಸ್ಟರ್ ಟ್ರೇನರ್‌ಗಳು ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬೇಕು. ಸಮೀಕ್ಷೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಸ್ಪಷ್ಟ ನಿಖರ ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ಕುಟುಂಬ ಸಮೀಕ್ಷೆಯಿಂದ ಕೈಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಲೋಪದೋಷ ಇರದಂತೆ ವಾಸ್ತವ ಹಾಗೂ ಪಾರದರ್ಶಕತೆಯಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ದಿಂದ ಎಲ್ಲ ಅಗತ್ಯ ಸಹಾಯ-ಸಹಕಾರ ಒದಗಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ,ಸಿಬ್ಬಂದಿಗಳು ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಉಪಸ್ಥಿತರಿದ್ದರು.