ಅಸಭ್ಯ ನಿಂದನೆ, ಪ್ರಚಾರದಿಂದ ಸಚಿವ ಅನುರಾಗ್ ಠಾಕೂರ್ ಗೆ ಕೊಕ್

ನವದೆಹಲಿ, ಜ 29 :   ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ರಾಜಕೀಯ ಪಕ್ಷಗಳು ಭರ್ಜರಿ ಸಭೆ, ಸಮಾವೇಶಗಳನ್ನು ನಡೆಸುತ್ತಿದ್ದು ಅರೋಪ ಪ್ರತ್ಯಾರೋಪ ನಿತ್ಯಮಂತ್ರವಾಗುತ್ತಿದೆ.  

ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾರನ್ನು   ಕೈಬಿಡುವಂತೆ ಚುನಾವಣಾ ಆಯೋಗ ಆದೇಶಿಸಿದೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಪಶ್ಚಿಮ ದಿಲ್ಲಿಯ ಶಾಸಕ ಪರ್ವೇಶ್ ವರ್ಮಾ ಸಾರ್ವಜನಿಕವಾಗಿ ಅಸಭ್ಯ , ಅಶ್ಲೀಲ ಭಾಷೆ ಬಳಸಿದ್ದಾರೆ ಎಂಬ  ಕಾರಣಕ್ಕಾಗಿ ಚುನಾವಣಾ ಆಯೋಗ ಈ ಆದೇಶ ಹೊರಡಿಸಿದೆ. 

ಪತ್ರಿಕಾ ಪ್ರಕಟನೆ ನೀಡಿದ್ದು, ಇದು ತಕ್ಷಣದಿಂದಲೇ  ಜಾರಿಯಾಗಬೇಕು ಎಂದೂ ಆಯೋಗ ತಾಕೀತು ಮಾಡಿದೆ. ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕರಾದ ಅಜಯ್ ಮಾಕೆನ್ ಮತ್ತು ಸುಭಾಶ್ ಚೋಪ್ರಾ ಅನುರಾಗ್ ಠಾಕೂರ್ ಮತ್ತು ಶಾಸಕ ಪರ್ವೇಶ್ ವರ್ಮಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಇದರ ಆಧಾರದ ಮೇಲೆ ಆಯೋಗ ಕ್ರಮ ಜರುಗಿಸಿದೆ.