ಬೆಂಗಳೂರು,
ಡಿ. 19 ಶಾಸಕ ಮುರುಗೇಶ್ ನಿರಾಣಿ ಇಂದು ಬೆಳಗ್ಗೆ ಡಾಲರ್ಸ್ ಕಾಲೋನಿಗೆ ಆಗಮಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿರುವ ಅವರು, ಸಚಿವ ಸ್ಥಾನಕ್ಕಾಗಿ
ಬೇಡಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ.ಬಿಎಸ್ ವೈ ಸಂಪುಟದಲ್ಲಿ ಕಿರಿಯ ಸಚಿವರಿಗೆ ಕೋಕ್ ಎಂಬ ಸುದ್ದಿ
ಬೆನ್ನಲ್ಲೇ ಸಚಿವೆ ಶಶಿಕಲಾ ಜೊಲ್ಲೆ ಬೆಳಗ್ಗೆಯೇ ಮುಖ್ಯಮಂತ್ರಿ
ನಿವಾಸಕ್ಕೆ ಆಗಮಿಸಿ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದರು.ಸುಮಾರು ಅರ್ಧ ಗಂಟೆ ಕಾಲ ಮುಖ್ಯಮಂತ್ರಿಯೊಂದಿಗೆ
ಸಚಿವೆ ಮಾತುಕತೆ ನಡೆಸಿದರು.ಸಂಕ್ರಾಂತಿ ನಂತರ ರಾಜ್ಯ ಮಂತ್ರಿ ಮಂಡಲದಲ್ಲಿ ಭಾರೀ ಬದಲಾವಣೆ ಸಾಧ್ಯತೆ
ಇದ್ದು, ಕೆಲವು ಹಾಲಿ ಸಚಿವರಿಗೆ ಕೊಕ್ ಕೊಡುವ ಸಾಧ್ಯತೆ ಹಿನ್ನೆಲೆಯಲ್ಲಿ ಶಶಿಕಲಾಜೊಲ್ಲೆ ಮುಖ್ಯಮಂತ್ರಿಯವರನ್ನು
ಭೇಟಿಯಾಗಿದ್ದಾರೆ ಎನ್ನಲಾಗಿದೆ.ವಹಿಸಿಕೊಟ್ಟ ಇಲಾಖೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡದ ಕೆಲವು ಸಚಿವರನ್ನು
ಬದಲಾಯಿಸುವ ಅಥವಾ ಅವರಿಗೆ ಬೇರೆ ಖಾತೆ ಕೊಡುವ ಸಾಧ್ಯತೆಯೂ ಇದೆ. ಕೆಲವು ಹಿರಿಯರನ್ನು ಸಂಪುಟಕ್ಕೆ
ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಕಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ
ದಟ್ಟವಾಗಿದೆ. ಒಂದು ಅಂದಾಜಿನ ಪ್ರಕಾರ 3ರಿಂದ 4 ಸಚಿವರಿಗೆ ಕೊಕ್ ಕೊಡುವ ಇರಾದೆಯನ್ನು ಮುಖ್ಯಮಂತ್ರಿ
ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.