ಧಾರವಾಡ 30: ಧಾರವಾಡ ಕೃಷಿ ವಿಶ್ವವಿದ್ಯಾಲಯವು ನವೆಂಬರ 27 ರಿಂದ ಕೆಲಗೇರಿ ಕೆರೆಯ ಬದುಗಳ ಮೇಲಿರುವ ಕಸ ಕಡ್ಡಿ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಲು ಪ್ರತಿದಿನ ಸುಮಾರು 32 ಕೃಷಿ ಕಾರ್ಮಿಕರನ್ನು ಅಲ್ಲದೇ ಇದರ ಉಸ್ತುವಾರಿ ನೋಡಿಕೊಳ್ಳಲು ಎರಡು ಕ್ಷೇತ್ರ ಸಹಾಯಕರು ಹಾಗೂ ಇಬ್ಬರು ವಿಜ್ಞಾನಿಗಳನ್ನು ನಿಯೋಜಿಸಲಾಗಿದೆ.
ಪ್ರತಿದಿನ 6 ರಿಂದ 8 ಟ್ರ್ಯಾಕ್ಟರ್‌ಗಳಿಗೆ ಕಸಕಡ್ಡಿಗಳನ್ನು ತುಂಬಿ ಸ್ವಚ್ಛಗೊಳಿಸಲಾಗುತ್ತಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕೆರೆಯ ಸುತ್ತಲಿನ ಎಲ್ಲ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ ಕೆರೆಯನ್ನು ಸುಂದರಗೊಳಿಸುವ ಉದ್ದೇಶವನ್ನು ಕೃಷಿ ವಿಶ್ವವಿದ್ಯಾಲಯ ಹೊಂದಿರುತ್ತದೆ. ವಿಶ್ವವಿದ್ಯಾಲಯದ ಕುಲಪತಿಗಳು, ಸಂಶೋಧನಾ ನಿರ್ದೇಶಕರು, ಸಹ ಸಂಶೋಧನಾ ನಿರ್ದೇಶಕರು ಹಾಗೂ ಇನ್ನಿತರ ಅಧಿಕಾರಿಗಳು ಕೂಡ ಕೆರೆಗೆ ಭೇಟಿ ಕೊಟ್ಟು ಅನೇಕ ಸಲಹೆ, ಸೂಚನೆಗಳನ್ನು ನೀಡಿ ಅವುಗಳನ್ನು ಕಾರ್ಯರೂಪಕ್ಕೆ ತರಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಈ ಕೆರೆಯ ಸ್ಚಚ್ಛತೆ ಬಗ್ಗೆ ಅರಿವು ಮೂಡಿಸಲು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸುತ್ತಿದೆ. ಈ ಕೆರೆಯ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರು ಆಸಕ್ತಿ ವಹಿಸಬೇಕೆಂದು ಕೃಷಿ ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.