ಪುದುಚೇರಿ, ನ 6: ಹಕ್ಕುಗಳು ಮತ್ತು ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ನಾಗರಿಕರು ಇದನ್ನು ಎಂದಿಗೂ ಮರೆಯಬಾರದು ಎಂದು ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಬುಧವಾರ ಹೇಳಿದ್ದಾರೆ. 'ನಾವು ಯಾರೇ ಆಗಿರಲಿ ಮತ್ತು ಎಲ್ಲೇ ಇರಲಿ, ಈ ವಿಷಯದಲ್ಲಿ ನಮ್ಮಲ್ಲಿ ಪ್ರಮುಖ ಬದಲಾವಣೆಯ ಅಗತ್ಯವಿದೆ. ನಾವೆಲ್ಲರೂ ಕಾನೂನು ಪಾಲಿಸುವುದರೊಂದಿಗೆ ನಮ್ಮ ಜವಾಬ್ದಾರಿಯನ್ನು ಅರಿತಾಗ ಯಾವುದೇ ಸಂಘರ್ಷಕ್ಕೆ ಅವಕಾಶವಿರುವುದಿಲ್ಲ.' ಎಂದು ವಾಟ್ಸಾಪ್ ಸಂದೇಶವೊಂದರಲ್ಲಿ ಕಿರಣ್ ಬೇಡಿ ಹೇಳಿದ್ದಾರೆ. ಜೀವ ಮತ್ತು ಆಸ್ತಿ-ಪಾಸ್ತಿಯನ್ನು ರಕ್ಷಿಸಲು ಹಾಗೂ ಕಾನೂನು ಮತ್ತು ಕಾನೂನುಬದ್ಧ ನಿರ್ದೇಶನಗಳನ್ನು ಗೌರವಿಸಿ ಜಾರಿಗೊಳಿಸಲು ಪೊಲೀಸ್ ಅಧಿಕಾರಿಗಳಿಗೆ ಕಾನೂನು ಜವಾಬ್ದಾರಿ ಇದೆ. ಈ ಕೆಲಸವನ್ನು ಮಾಡಲು ಅವರಿಗೆ ತರಬೇತಿ ನೀಡಲಾಗುತ್ತದೆ. ರಕ್ಷಣೆಯಲ್ಲಿ ವಿಫಲರಾಗುವುದು ನಿರ್ಲಕ್ಷ್ಯ, ಹೇಡಿತನ ಎಂದು ಲೆಫ್ಟಿನೆಂಟ್ ಗವರ್ನರ್ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯವನ್ನು ನ್ಯಾಯಯುತವಾಗಿ, ದೃಢವಾಗಿ, ನಿರ್ಭಯವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ, ಅವರನ್ನು ಕಾಪಾಡಬೇಡುವ ಹೊಣೆ ಅವರ ಆಧಿಕಾರಿಗಳಿಗೆ ಇದೆ. ಇದಕ್ಕಿಂತ ಮುಖ್ಯವಾಗಿ ಪೊಲೀಸರ ಕಾರ್ಯಗಳು ಯಾವಾಗಲೂ ಪೂರ್ಣ ತನಿಖೆಗೆ ಮುಕ್ತವಾಗುತ್ತವೆ. ಆದ್ದರಿಂದಲೇ ಪೊಲೀಸ್ ಇಲಾಖೆಗಳಲ್ಲಿ ಇಲಾಖಾ ತನಿಖೆಗಳು ಮತ್ತು ವಿಶೇಷ ವಿಚಕ್ಷಣ ವಿಭಾಗಗಳು ಇರುತ್ತವೆ. ಸಿಬ್ಬಂದಿಯ ಕರ್ತವ್ಯ ಲೋಪಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಇಲಾಖೆಯ ಕರ್ತವ್ಯವಾಗಿದೆ ಎಂದು ಕಿರಣ್ಬೇಡಿ ಅಭಿಪ್ರಾಯಪಟ್ಟಿದ್ದಾರೆ.