ಸಿನ್ಸಿನಾಟಿ, ಆ 17 ವಿಶ್ವ ಅಗ್ರ ಕ್ರಮಾಂಕದ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಅವರು ಇಲ್ಲಿ ನಡೆಯುತ್ತಿರುವ ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಆದರೆ, ಮಹಿಳಾ ಸಿಂಗಲ್ಸ್ ವಿಭಾಗದ ನಂ. 1 ಆಟಗಾತರ್ಿ ನವೋಮಿ ಒಸಾಕ ಅವರು ಗಾಯದಿಂದಾಗಿ ಪಂದ್ಯವನ್ನು ಅರ್ಧಕ್ಕೆ ಮೊಟುಕುಗೊಳಿಸಿದರು.
ಶನಿವಾರ 83 ನಿಮಿಷಗಳ ಕಾಲ ನಡೆದ ಸಿನ್ಸಿನಾಟಿ ಮಾಸ್ಟರ್ಸ್ ಕ್ವಾರ್ಟರ್ ಫೈನಲ್ಸ್ ಕಾದಾಟದಲ್ಲಿ ಅದ್ಭುತ ಪ್ರದರ್ಶನ ತೋರಿದ ಸರ್ಬಿಯಾ ಆಟಗಾರ 7-6 (7/2), 6-1 ಅಂತರದಲ್ಲಿ ಫ್ರಾನ್ಸ್ನ ಲುಕಾಸ್ ಪೌಲ್ಲೆ ಅವರ ವಿರುದ್ಧ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟರು.
ಜೊಕೊವಿಚ್ ಅವರು ನಾಳೆ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಡೆನಿಲ್ ಮೆಡ್ವೆಡೆವ್ ವಿರುದ್ಧ ಸೆಣಸಲಿದ್ದಾರೆ. ಡೆನಿಲ್ ಮೆಡ್ವೆಡೆವ್ ಅವರು ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-2, 6-3 ಅಂತರದಲ್ಲಿ ತಮ್ಮದೇ ದೇಶದವರಾದ ಆ್ಯಂಡ್ರಿ ರಬ್ಲೇವ್ ವಿರುದ್ಧ ಸುಲಭ ಜಯ ಸಾಧಿಸಿದ್ದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆ ನವೋಮಿ ಒಸಾಕ ಅವರು ಪಂದ್ಯದ ವೇಳೆ ಗಾಯಕ್ಕೆ ಒಳಗಾಗಿ ಸ್ಪರ್ದೆಯಿಂದ ಹೊರ ನಡೆದರು. ಮೊದಲ ಸೆಟ್ನಲ್ಲಿ ಅಮೆರಿಕದ ಸೋಫಿಯಾ ಕೆನಿನ್ 6-4 ಅಂತರದಲ್ಲಿ ಗೆದ್ದಿದ್ದರು.
ಎರಡನೇ ಸೆಟ್ನಲ್ಲಿ ಒಸಾಕ 6- 1 ಅಂತರದಲ್ಲಿ ಜಯ ಸಾಧಿಸಿದ್ದರು. ನಂತರ ನಿರ್ಣಾಯಕ ಸೆಟ್ನಲ್ಲಿ 0-2 ಅಂತರದಲ್ಲಿದ್ದಾಗ ಒಸಾಕ ಅವರು ತಮ್ಮ ಮೊಣಕಾಲು ಗಾಯಕ್ಕೆ ಒಳಗಾಗಿ ಪಂದ್ಯವನ್ನು ಅರ್ಧಕ್ಕೆ ಬಿಟ್ಟರು. ಇದರ ಫಲವಾಗಿ ಅಮೆರಿಕ ಯುವ ಆಟಗಾತರ್ಿ ಕೆನಿನ್ ಸಿನ್ಸಿನಾಟಿ ಮಾಸ್ಟರ್ಸ್ ಸೆಮಿಫೈನಲ್ಗೆ ಪ್ರವೇಶ ಮಾಡಿದರು.
ಮತ್ತೊಂದು ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ವಿನಸ್ ವಿಲಿಯಮ್ಸ್ ಅವರು 2-6, 3-6 ಅಂತರದಲ್ಲಿ ಅಮೆರಿಕದವರೇ ಆದ ಮ್ಯಾಡಿ ಕೇಯ್ಸ್ ಅವರ ವಿರುದ್ಧ ಸೋತು ನಿರಾಸೆ ಅನುಭವಿಸಿದರು. ಕೇಯ್ಸ್ ಅವರು ಸೆಮಿಫೈನಲ್ ಹಣಾಹಣಿಯಲ್ಲಿ ಸೋಫಿಯಾ ಕೆನಿನ್ ವಿರುದ್ಧ ನಾಳೆ ಸೆಣಸಲಿದ್ದಾರೆ.