ಬೆಂಗಳೂರು, ಜ.9, ದೇಶದ ಪೌರತ್ವವನ್ನು ವ್ಯಕ್ತಿಗತ ಅರ್ಹತೆಯನ್ನು ಪರಿಗಣಿಸಿ ನೀಡಬೇಕೇ ಹೊರತು ಧರ್ಮದ ಆಧಾರದಲ್ಲಿ ಅಲ್ಲ. ದೇಶ ಮತ್ತು ನಾಗರಿಕರ ಒಳಿತಿಗಾಗಿ ಕಾಯ್ದೆಯನ್ನು ಹಿಂಪಡೆಯುವುದು ಸೂಕ್ತ ಎಂದು ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಹಾಗೂ ಅಖಿಲ ಭಾರತ ಕ್ರೈಸ್ತ ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ಡಾ.ಪೀಟರ್ ಮಚಾದೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯು ಸಾಮಾನ್ಯ ನಾಗರಿಕತ್ವಕ್ಕೆ ಈ ಹಿಂದೆ ಅವಶ್ಯಕವಾಗಿದ್ದ 11 ವರ್ಷಗಳ ಕಾಲಾವಧಿಯನ್ನು 5 ವರ್ಷಗಳಿಗೆ ಇಳಿಸಿದ್ದು, ಇದು ಸಹ ಮೂರು ದೇಶಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಜನರಲ್ಲಿ ಅಪಾರ್ಥ ಮತ್ತು ಗೊಂದಲವನ್ನು ಸೃಷ್ಟಿಸಿ ಅಸ್ಸಾಮ್ರಾ ಜ್ಯದಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರಕ್ಕೆ ಕಾರಣವಾಗಿದೆ. ಈ ಪ್ರತಿಭಟನೆಗಳು ದಿನೇ ದಿನೇ ದೇಶಾದ್ಯಂತ ತೀವ್ರಗತಿಯಲ್ಲಿ ವ್ಯಾಪಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ದೇಶಗಳಿಂದ ಭಾರತದೊಳಕ್ಕೆ ಅಕ್ರಮವಾಗಿ ನುಸುಳಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ವಲಸಿಗರಿಗೆ ಈ ಕಾಯ್ದೆ ಪೌರತ್ವ ನೀಡುತ್ತದೆ. ಆದರೆ ಈ ವಲಸಿಗರನ್ನು ಹೊರತುಪಡಿಸಿ ಈ ರಾಷ್ಟ್ರಗಳ ಇತರ ಸಮುದಾಯದವರು ಭಾರತದ ಪೌರತ್ವಕ್ಕೆ ಯೋಗ್ಯರಾಗಿರುವುದಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವ ದೇಶದ ಸಮಸ್ತ ನಾಗರಿಕರು ಯಾವುದೇ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಬಾರದೆಂದು ವಿನಂತಿಸುವಾಗ, ಕೇಂದ್ರ ಸರ್ಕಾರವು ಪೌರತ್ವವನ್ನು ಧರ್ಮದ ಆಧಾರದ ಮೇಲೆ ನೀಡಬಾರದೆಂದು ನಾವು ಬೇಡಿಕೊಳ್ಳುತ್ತಿದ್ದೇವೆ. ವ್ಯಕ್ತಿಗತ ಅರ್ಹತೆಯನ್ನು ಪರಿಗಣಿಸಿ ಪೌರತ್ವವನ್ನು ನೀಡಿದಾಗ ಮಾತ್ರ ಅಕ್ರಮ ವಲಸಿಗರಿಗೆ ನ್ಯಾಯ ಕಲ್ಪಿಸಿದಂತಾಗುತ್ತದೆ ಎಂದು ಮಚಾಡೋ ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನವಾದರೆ ಭಾರತದ ನಾಗರಿಕರನ್ನು ಧರ್ಮದ ಆಧಾರದಲ್ಲಿ ಧೃವೀಕರಿಸುವ ಸಂಭವವಿದೆ. ಇದು ದೇಶಕ್ಕೆ ಮಾರಕ. ಅಭಿಪ್ರಾಯ, ಅನಿಸಿಕೆಗಳಲ್ಲಿ ಸಂಘರ್ಷವೇರ್ಪಟ್ಟರೆ ಅವುಗಳನ್ನು ಬಗೆಹರಿಸಿಕೊಳ್ಳಲು ಹಿಂಸೆಯು ಯಾವುದೇ ರೀತಿಯಲ್ಲಿ ನೆರವಾಗುವುದಿಲ್ಲ. ಸರ್ಕಾರವು ಈ ಕಾಯ್ದೆಯನ್ನು ವಿರೋಧಿಸುತ್ತಿರುವವರೊಂದಿಗೆ ಸಂವಾದ ನಡೆಸಿ, ಅವರ ವಾದಗಳನ್ನೂ ಆಲಿಸಿ, ಅದಕ್ಕೆ ನ್ಯಾಯಯುವ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ದೇಶದ ಹಾಗೂ ನಾಗರಿಕರ ಒಳಿತಿಗಾಗಿ ಈ ಕಾಯ್ದೆಯನ್ನು ಹಿಂಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ, ವ್ಯಕ್ತಿಗತ ಅರ್ಹತೆಯನ್ನು ಅವಲೋಕಿಸಿ ಪೌರತ್ವ ನೀಡಿದಾಗ ಮಾತ್ರ ಅವರಲ್ಲಿ ಸಮಾನತೆಯ ಭಾವನೆ ಮೂಡಿಸಬಹುದು. ಎಲ್ಲಕ್ಕಿಂತ ಮಿಗಿಲಾಗಿ ಈ ದೇಶದ ನಾಗರಿಕರಾದ ನಮಗೆ ಸಂವಿಧಾನದ ಮೇಲೆ ಅಪಾರ ಗೌರವವಿದೆ. ದೇಶದ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುತ್ತೇವೆ ಎಂಬ ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಧರ್ಮಾಧ್ಯಕ್ಷರು ಹೇಳಿದರು.ಕ್ರೈಸ್ತ ಸಮುದಾಯದವರು ಈ ದೇಶದ ನಾಗರಿಕರ ಅಭಿವೃದ್ಧಿಗಾಗಿ ಯಾವುದೇ ತಾರತಮ್ಯ, ದ್ವೇಷವಿಲ್ಲದೆ ದುಡಿಯುತ್ತಿದ್ದಾರೆ. ಸಮಾನತೆ, ನ್ಯಾಯ, ನೀತಿಯ ಮೂಲಕ ಈ ದೇಶವನ್ನು ಕಟ್ಟಲು ಶ್ರಮಿಸುತ್ತಿದ್ದಾರೆ. ಈ ದೇಶದಲ್ಲಿ ಧರ್ಮದ ಆಧಾರದ ಮೇಲೆ ಭೇದಭಾವಕ್ಕೊಳಗಾಗಿ, ಹಿಂಸೆಯನ್ನು ಅನುಭವಿಸುತ್ತಿರುವವರ ಪರವಾಗಿ ನಾವು ನಿಲ್ಲುತ್ತೇವೆ, ಅವರೆಲ್ಲರಿಗೂ ನ್ಯಾಯ ದೊರಕುವಂತಾಗಲಿ ಹಾಗೂ ನಮ್ಮ ತಾಯ್ನೆಲದಲ್ಲಿ ಒಂದೇ ಕುಟುಂಬದ ಸಹೋದರ-ಸಹೋದರಿಯರಾಗಿ ಜೀವಿಸುವಂತಾಗಲಿ ಎಂದು ಆಶಿಸುತ್ತೇವೆ ಎಂದು ಪೀಟರ್ ಮಚಾದೋ ತಿಳಿಸಿದರು.