‘ದೊಡ್ಡೋರು’ ಸೆಟ್ಟೇರಲಿಲ್ಲ, ಚಿರು ಕನಸು ನನಸಾಗಲಿಲ್ಲ

ಬೆಂಗಳೂರು, ಜೂನ್ 10,ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಕಾಲಿಕ ಸಾವನ್ನು ಅರಗಿಸಿಕೊಳ್ಳಲು ಇನ್ನೂ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಅವರೊಡನೆ ಸಮಯ ಕಳೆದ ಬಹುತೇಕ ಕಲಾವಿದರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ನೆನಪನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿ, ಮಹತ್ತರ ಸಾಧನೆ ಮಾಡಬೇಕು ಎಂಬ ಉತ್ಸಾಹದಲ್ಲಿದ್ದ ಚಿರು ಸರ್ಜಾ ‘ದೊಡ್ಡೋರು’ ಶೀರ್ಷಿಕೆಯ ಸಿನಿಮಾ ಬಗ್ಗೆ ಬಹಳ ಭರವಸೆ ಇಟ್ಟುಕೊಂಡಿದ್ದರಂತೆ.ಹೌದು, ಈ ಕುರಿತು ನಿರ್ದೇಶಕ ಹರಿ ಸಂತೋಷ್ ಮಾಹಿತಿ ನೀಡಿದ್ದಾರೆ.  ಚಿರು ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಸಂತು, “ದೊಡ್ಡೋರು ಚಿತ್ರ ಕಥೆಯ ಬಗ್ಗೆ ಚಿರು ಜತೆ ಮಾತುಕತೆಯಾಗಿತ್ತು. ಚಿತ್ರಕಥೆಯನ್ನು ಬಹಳವಾಗಿ ಮೆಚ್ಚಿದ್ದರು.  ಟೈಟಲ್ ಸಾಂಗ್ ಕೂಡ ಸಿದ್ಧವಾಗಿತ್ತು. 

ಆದರೆ ಚಿತ್ರ ಸೆಟ್ಟೇರುವ ಮೊದಲೇ ಅವರು ನಮ್ಮಿಂದ ದೂರವಾಗಿದ್ದಾರೆ” ಎಂದು ಶೋಕಿಸಿದ್ದಾರೆ.‘ದೊಡ್ಡೋರು’ ಸಿನಿಮಾಗೆ ಬಹಳ ದೊಡ್ಡ ಮಟ್ಟದಲ್ಲಿ ತಯಾರಿ ನಡೆದಿತ್ತು.  ಟೈಟಲ್ ಸಾಂಗ್‍ ಗೆ ಚಂದನ್ ಶೆಟ್ಟಿ ದನಿಯಾಗಿದ್ದರು. ಚಿರು ಅಭಿನಯದ ಹಲವು ಚಿತ್ರಗಳ ತುಣಕುಗಳನ್ನು ಆಯ್ಕೆ ಮಾಡಿ ಟೈಟಲ್ ಕಟ್ ಮಾಡಲಾಗಿತ್ತು. ಹಲವು ಬಾರಿ ಅದನ್ನು ವೀಕ್ಷಿಸಿ ಆನಂದಿಸಿದ್ದರಂತೆ ಚಿರು. ‘ದೊಡ್ಡೋರು’ ಚಿತ್ರದ ನಾಯಕನ ಪಾತ್ರಕ್ಕೆ ಫಿಟ್ ಅಂಡ್ ಫೈನ್ ಆಗಿದ್ದ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡು ನಿರ್ದೇಶಕ ಹರಿ ಸಂತೋಷ್ ಮತ್ತು ತಂಡ ದುಃಖದಲ್ಲಿ ಮುಳುಗಿದೆ.  ಚಿರು ಬಹಳ ಇಷ್ಟಪಟ್ಟಿದ್ದ, ಬಹಳ ಭರವಸೆಯಿಟ್ಟಿದ್ದ ಚಿತ್ರ ಮಾಡಲಾಗಲಿಲ್ಲವಲ್ಲ ಎಂದು ಹಪಹಪಿಸಿದೆ. ಯೂಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್ ಮಾಡುವ ಮೂಲಕ ಕಲಾವಿದನ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದೆ.