ಆದಿವಾಸಿಗಳಿಗೆ ಸನ್ಮಾರ್ಗದತ್ತ ಕೊಂಡೊಯುತ್ತಿರುವ ಚಿನ್ಮಯಸಾಗರ ಮುನಿಮಹಾರಾಜರು

ಲೋಕದರ್ಶನ ವರದಿ

ಶೇಡಬಾಳ 13:  ಉತ್ತರ ಭಾರತದಲ್ಲಿನ ಆದಿವಾಸಿಗಳಿಗೆ ನಾಗರಿಕತೆ ಹಾಗೂ ಅಹಿಂಸಾ ತತ್ವವನ್ನು ಭೋಧಿಸಿ ಅವರನ್ನು ಸನ್ಮಾರ್ಗದತ್ತ ಕೊಂಡೊಯುವ ಕಾರ್ಯವನ್ನು ರಾಷ್ಟ್ರ ಸಂತ ಜಂಗಲವಾಲೆ ಬಾಬಾ ಎಂದೇ ಖ್ಯಾತರಾಗಿರುವ ಶ್ರೀ 108 ಚಿನ್ಮಯಸಾಗರ ಮುನಿಮಹಾರಾಜರು ಕೈಗೊಂಡಿದ್ದಾರೆಂದು ಹಿರಿಯ ಮುಖಂಡರಾದ ಕಿರಣಕುಮಾರ ಪಾಟೀಲ ಹೇಳಿದರು.

ಅವರು ರವಿವಾರ ದಿ. 13 ರಂದು ಜುಗೂಳ ಗ್ರಾಮದಲ್ಲಿ ಯಮಸಲ್ಲೇಖನ ವೃತ ಸ್ವೀಕರಿಸಿರುವ ರಾಷ್ಟ್ರಸಂತ 108 ಶ್ರೀ ಚಿನ್ಮಯಸಾಗರ ಮುನಿಮಹಾರಾಜರ ದರ್ಶನವನ್ನು ಪಡೆದು ಮಾತನಾಡುತ್ತಿದ್ದರು. ಚಿನ್ಮಯಸಾಗರ ಮುನಿಮಹಾರಾಜರು ಜೈನ ಧರ್ಮಿಯರಿಗೆ ಮಾತ್ರ ಮೀಸಲಾಗಿರದೇ ಎಲ್ಲ ಧರ್ಮಿಯರನ್ನು ಸಮಭಾವದಿಂದ ಕಾಣುತ್ತಾ  ಮಾನವ ಧರ್ಮ ಒಂದೇ, ವಿಶ್ವ ಧರ್ಮ ಒಂದೇ ಎಂದು ಪ್ರತಿಪಾದಿಸಿದ ಮಹಾನ್ ಸಂತರಾಗಿದ್ದಾರೆಂದು ಬಣ್ಣಿಸಿದರು. ಉತ್ತರ ಭಾರತದಲ್ಲಿನ ಆದಿವಾಸಿಗಳಿಗೆ ನಾಗರಿಕತೆ ಹಾಗೂ  ಧರ್ಮೋಪದೇಶವನ್ನು ಮಾಡಿ ಅವರನ್ನು ಸಮಾಜದಲ್ಲಿ ಸಕ್ರೀಯಗೊಳಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಲಕ್ಷಾಂತರ ಜನರು ಅವರ ಹಿತೋಪದೇಶದ ಪ್ರಭಾವಕ್ಕೆ ಒಳಗಾಗಿ  ಅಹಿಂಸಾ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ಸುಖಮಯ ಜೀವನ ಸಾಗಿಸುತ್ತಿದ್ದಾರೆಂದು ಹೇಳಿದರು. ಯಮಸಲ್ಲೇಖನ ವೃತ ಸ್ವೀಕರಿಸಿ ಸಮಾಧಿ ಮರಣ ಸಾಧಿಸಲು ಹೊರಟಿರುವ ರಾಷ್ಟ್ರಸಂತ ಚಿನ್ಮಯಸಾಗರ ಮುನಿಮಹಾರಾಜರ ದರ್ಶನಕ್ಕಾಗಿ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಿರುವುದೇ ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆಂದು ಬಣ್ಣಿಸಿದರು.   

ಈ ಸಮಯದಲ್ಲಿ ಕಾಗವಾಡ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಅರುಣ ಗಣೇಶವಾಡೆ, ಚಿನ್ಮಯ ಸಾಗರ ಟ್ರಸ್ಟ್ನ ಅಧ್ಯಕ್ಷ ಪ್ರಕಾಶ ಮೋದಿ, ಸುಮನ ಮೋದಿ ಸೇರಿದಂತೆ ಅನೇಕರು ಇದ್ದರು.