ಮಕ್ಕಳು ಅಲ್ಬೆಂಡಾಜೋಲ್ ಮಾತ್ರೆಯನ್ನು ತಪ್ಪದೇ ಸೇವಿಸಬೇಕು: ಡಾ ಲಿಂಗರಾಜು

Children should take Albendazole tablets without fail: Dr Lingaraju

ಮಕ್ಕಳು ಅಲ್ಬೆಂಡಾಜೋಲ್ ಮಾತ್ರೆಯನ್ನು ತಪ್ಪದೇ ಸೇವಿಸಬೇಕು: ಡಾ ಲಿಂಗರಾಜು 

ಕೊಪ್ಪಳ  09:  ಎಲ್ಲಾ ಮಕ್ಕಳು ಕಡ್ಡಾಯವಾಗಿ ಅಲ್ಬೆಂಡಾಜೋಲ್ ಮಾತ್ರೆಯನ್ನು ತಪ್ಪದೇ ಸೇವಿಸಬೇಕೆಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಲಿಂಗರಾಜು.ಟಿ ಹೇಳಿದರು.  

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೊಪ್ಪಳದ ಹೀರೆಕಾಸನಕಂಡಿ ಶ್ರೀ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಂಯುಕ್ತಾಶ್ರಯದಲ್ಲ್ಲಿ ಸೋಮವಾರ ವಸತಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮದ ಅಂಗವಾಗಿ ಜಂತುಹುಳು ನಿವಾರಣೆ ಮಾತ್ರೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮತನಾಡಿದರು.  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಲಿಂಗರಾಜು ಟಿ, ಕೊಪ್ಪಳ, ಇವರು ಸಸಿಗೆ ನೀರು ಎರೆಯುವುದರ ಮೂಲಕ ಹಾಗೂ ಮಕ್ಕಳಿಗೆ ಮಾತ್ರೆಯನ್ನು ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ  

ಅಲ್ಬೆಂಡಾಜೋಲ್ ಮಾತ್ರೆಯನ್ನು 1 ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ. ಮಕ್ಕಳಿಗೆ  ಜಂತುನಿವಾರಕ ಮಾತ್ರೆ ಕೊಡುವುದರಿಂದ, ರಕ್ತಹೀನತೆಯನ್ನು ನಿಯಂತ್ರಿಸುತ್ತದೆ. ಪೌಷ್ಠಿಕಾಂಶ ಹೀರುವಿಕೆಯನ್ನು ಸುಧಾರಿಸುತ್ತದೆ. ಏಕ್ರಾಗತೆ, ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಶಾಲೆಗಳ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯನ್ನು ಸುಧಾರಿಸಲು ನೆರವಾಗುತ್ತದೆ. ಪರಿಸರದಲ್ಲಿ ಜಂತುಹುಳುಗಳನ್ನು ಕಡಿಮೆ ಮಾಡುವುದರ ಮೂಲಕ ಸಮುದಾಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ.  

ಈ ಕಾರ್ಯಕ್ರಮವನ್ನು ವರ್ಷದಲ್ಲಿ 2 ಬಾರಿಯಂತೆ 6 ತಿಂಗಳಿಗೊಮ್ಮೆ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು, ವಸತಿಶಾಲೆ, ಬಾಲಮಂದಿರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಎಲ್ಲಾ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸುತ್ತಾರೆ. ಪಾಲಕರು ತಮ್ಮ ಮಕ್ಕಳ ಆರೋಗ್ಯ ಬಗ್ಗೆ ಕಾಳಜಿ ವಹಿಸಿ ಸಮೀಪದ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಿ ಮಾತ್ರೆಯನ್ನು ಕೊಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ ಡಿ.9ರಂದು ಅಲ್ಬೆಂಡಾಜೋಲ್ ಮಾತ್ರೆಗಳನ್ನು ನೀಡಲಾಗಿದ್ದು, ತಪ್ಪಿಹೋದ ಮಕ್ಕಳಿಗೆ ಡಿ.16ಕ್ಕೆ ರಂದು ಮತ್ತೆ ಅಲ್ಬೆಂಡಾಜೋಲ್ ಮಾತ್ರೆಗಳ ವಿತರಣೆ ಮಾಡಲಾಗುತ್ತದೆ.  

      ಜಿಲಾ ಆರ್‌.ಸಿ.ಹೆಚ್ ಅಧಿಕಾರಿ ಡಾ ಪ್ರಕಾಶ.ವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಗುರಿ ಮತ್ತು ಉದ್ದೇಶ ಕುರಿತು ವಿವರವಾಗಿ ತಿಳಿಸಿದರು. ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ ಕಾಪಾಡಬೇಕು. ಊಟ ಮಾಡುವ ಮೊದಲು, ಶೌಚಾಲಯಕ್ಕೆ ಹೊಗಿ ಬಂದ ನಂತರ ಸೋಪು ಬಳಸಿ ಕೈತೊಳೆಯುವ ವಿಧಾನದ ಕುರಿತು ತಿಳಿಸಿದರು. 

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಆಕ್ಷರತಾ ಇಲಾಖೆ ಉಪನಿರ್ದೇಶಕ ಶ್ರಿಶೈಲ ಎಸ್‌.ಬಿರಾದರ್ ಅವರು ಮಾತನಾಡಿ, ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟಲು ಇಂತಹ ಕಾರ್ಯಕ್ರಮ ಬಹಳಷ್ಟು ಉಪಯೋಗವಾಗಿದೆ. “ಜಂತು ರಹಿತ ಮಕ್ಕಳು  ದೇಶದ ಸಂಪತ್ತು” ಆರೋಗ್ಯ ವಂತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.  

ಪ್ರಾಂಶುಪಾಲರಾದ ಮಂಜುನಾಥ ಬೇಳೂರು ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ ವೆಂಕಟೇಶ, ಕೊಪ್ಪಳ ತಾಲೂಕ ಆರೋಗ್ಯ ಅಧಿಕಾರಿ ಡಾ ರಾಮಾಂಜನೇಯ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ ವಿನಾಯಕ, ಡಾ ಮಹೇಶ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮದ ಅನುಷ್ಠಾನದ ಅಧಿಕಾರಿಗಳು, ಕಾರ್ಯಕ್ರಮ ವ್ಯವಸ್ಥಾಪಕರು, ಸಂಯೋಜಕ ಮಂಜುನಾಥ, ಆರೋಗ್ಯ ಶಿಕ್ಷಣ ಅಧಿಕಾರಿಗಳು, ಇತರ ಮೇಲ್ವಿಚಾರಕ ವರ್ಗದವರು, ಶಾಲಾ ಶಿಕ್ಷಕರು, ಆಶಾ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಇತರೆ ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.  

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ವಸತಿ ಶಾಲೆಯ ಇಂಗ್ಲಿಷ್ ಶಿಕ್ಷಕ ಸಂತೋಷ್ ಸ್ವಾಗತ ಕೋರಿದರು. ಗಂಗಮ್ಮ ಅವರು ವಂದಿಸಿದರು.