ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಬೇಕು

ಬಾಗಲಕೋಟೆ೧೯: ಜಿಲ್ಲೆಯಾದ್ಯಂತ ನಾಲ್ಕು ದಿನಗಳ ಕಾಲ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಚಾಲನೆ ನೀಡಿದರು.

ನವನಗರದ ಸೆಕ್ಟರ್ ನಂ.47 ರಲ್ಲಿರುವ ನಗರ ಆರೋಗ್ಯ ಪ್ರಾಥಮಿಕ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು. ಪಾಲಕರು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಇತರರಿಗೆ ಪ್ರೇರೆಪಿಸಿ ಈ ಅಭಿಯಾನ ಯಶಸ್ವಿಗೆ ಸಹಕರಿಸಲು ಕೋರಿದರು.

ಶಾಸಕ ವೀರಣ್ಣ ಚರಂತಿಮಠ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಮಾತನಾಡಿದ ಅವರು ಮಾತನಾಡಿ ಜಿಲ್ಲೆಯಾದ್ಯಂತ ನಾಲ್ಕು ದಿನ ನಡೆಯುವ ಪಲ್ಸ್ ಪೋಲಿಯೋ ಅಭಿಯಾಯದಲ್ಲಿ 5 ವರ್ಷದೊಳಗಿನ ಒಟ್ಟು 232414 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಬಾಗಲಕೋಟೆ ತಾಲೂಕಿನಲ್ಲಿ 34061, ಬಾದಾಮಿ 36660, ಹುನಗುಂದ 38448, ಬೀಳಗಿ 20456, ಮುಧೋಳ 40591 ಹಾಗೂ ಜಮಖಂಡಿ ತಾಲೂಕಿನಲ್ಲಿ 62198 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಈ ಅಭಿಯಾದಲ್ಲಿ ಯಾವುದೇ ಮಗು ಈ ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು. 

ಲಸಿಕಾ ಕಾರ್ಯಕ್ಕೆ 1373 ಬೂತಗಳನ್ನು ತೆರೆಯಲಾಗಿದ್ದು, ಲಸಿಕೆಯನ್ನು ಹಾಕಲು 2826 ಸಿಬ್ಬಂದಿಗಳು ಹಾಗೂ 260 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಮೊದನಲೇ ದಿನ ಬೂತ ಮಟ್ಟದಲ್ಲಿ ನಡೆಯಲಿದ್ದು, ನಂತರ ಮೂರು ದಿನ ಮನೆ ಮನೆ ಭೇಟಿ ನೀಡಿ ಪೋಲಿಯೋ ಲಸಿಕೆಯನ್ನು ಹಾಕಲಾಗುತ್ತಿದೆ. ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸುವಂತೆ ಕೋರಿದರು. ಇದೇ ಸಂದರ್ಭದಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಗೀತೆಗಳನ್ನು ನರೇನೂರಿನ ಸಂಗನಬಸಯ್ಯ ಹಿರೇಮಠ ಕಲಾತಂಡದವರು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ ಅಧ್ಯಕ್ಷ ಚನ್ನನಗೌಡರ ಪರನಗೌಡರ, ನಗರಸಭೆ ಸದಸ್ಯ ಅಂಬಾಜಿ ಜ್ಯೋತಿ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಲಸಿಕಾ ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ, ಕುಟುಂಬ ಕಲ್ಯಾಣಾಧಿಕಾರಿ ಬಿ.ಡಿ.ಪಟ್ಟಣಶೆಟ್ಟಿ, ಆರೋಗ್ಯ ಶಿಕ್ಷಣಾಧಿಕಾರಿ ಪವಾಡೆಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.