ಲೋಕದರ್ಶನ ವರದಿ
ಬಿಸಿಲ ಝಳಕ್ಕೆ ಶಾಲೆಗೆ ಬಾರದ ಮಕ್ಕಳು: ಕೋಣೆಗಳು ಖಾಲಿ ಖಾಲಿ
ಸಿ ಮಹಾದೇವ ಅರಕೇರಿ
ಹಾರೂಗೇರಿ : ರಾಜ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ಅವಧಿಗಿಂತ ಮೊದಲೇ ಬೇಸಿಗೆ ಆರಂಭವಾಗಿದ್ದು, ಬಿಸಿಲ ಝಳಕ್ಕೆ ಅಂಜಿ ಮಕ್ಕಳು ಶಾಲೆಯತ್ತ ಮುಖ ಮಾಡಲು ಹಿಂದೇಟು ಹಾಕುವಂತಾಗಿದೆ. ಇದರಿಂದಾಗಿ ಶಾಲಾ ಕೋಣೆಗಳು ಖಾಲಿ ಹೊಡೆಯುತ್ತಿವೆ.
ಬಿಸಿಲಿನಿಂದಾಗಿ ಈ ಬಾರಿಯ ಶೈಕ್ಷಣಿಕ ವರ್ಷವನ್ನು ಬೇಗನೆ ಕೊನೆಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿತ್ತಾದರೂ, ಶೈಕ್ಷಣಿಕ ವರ್ಷಾಂತ್ಯ ಮುಗಿಯುತ್ತ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಕೆಲವು ಜಿಲ್ಲೆಗಳಲ್ಲಿ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಫೆಬ್ರುವರಿ ಆರಂಭದಲ್ಲಿಯೇ ಬಿಸಿಲಿನ ಪ್ರಖರತೆ ಹೆಚ್ಚಿ, ಮಾರ್ಚ ಹಾಗೂ ಎಪ್ರೀಲ್ ತಿಂಗಳು ಸುಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಈಗಾಗಲೇ ಪ್ರಾಥಮಿಕ, ಪ್ರೌಢಶಾಲೆ ಪರೀಕ್ಷೆಗಳು ಮಾರ್ಚ ಮೊದಲ ವಾರದಲ್ಲೇ ಆರಂಭವಾಗಿ ಕೊನೆಯ ವಾರದಲ್ಲಿ ಮುಗಿಸಿದ್ದು, ಫಲಿತಾಂಶ ಬಾಕಿಯಿದೆ. ಬಿಸಿಲಿನ ತಾಪಮಾನ ಏರುಗತಿ ಕಾಣಿಸಿಕೊಂಡಿದ್ದು, ಬಿರುಬಿಸಿಲು ಜನರನ್ನು ಹೊರಗೆ ಕಾಲಿಡದಂತೆ ಸುಡುತ್ತಿದೆ. ಬಿಸಿಲಿನ ತಾಪಕ್ಕೆ ಅಂಜಿ ಬಹುತೇಕ ಶಾಲೆಗಳಲ್ಲಿ ಪರೀಕ್ಷೆಗಳು ಮುಗಿದ ನಂತರ ಮಾರ್ಚ್ ಕೊನೆಯ ವಾರದಿಂದಲೇ ಮಕ್ಕಳು ಶಾಲೆಯತ್ತ ಮುಖ ಮಾಡಿಲ್ಲ.
ಮಕ್ಕಳು ಬಿಸಿಲಿನಲ್ಲಿ ಓಡಾಟ, ಆಟಗಳಲ್ಲಿ ತೊಡಗುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತಿದೆ. ಬಿಸಿಲಿನ ಝಳಕ್ಕೆ ತಲೆಸುತ್ತು ಕಾಣಿಸಿಕೊಳ್ಳುತ್ತಿದೆ. ವೈದ್ಯರು ಬೆಳಿಗ್ಗೆಯಿಂದ ಸಂಜೆವರೆಗೆ ಮಕ್ಕಳನ್ನು ಬಿಸಿಲಿನಲ್ಲಿ ಆಟ, ಓಡಾಟ ತಪ್ಪಿಸಬೇಕು. ಸದಾ ತಂಪು ವಾತಾವರಣದಲ್ಲಿರಬೇಕು. ಹೆಚ್ಚು ನೀರು ಸೇವನೆ ಮಾಡಬೇಕೆಂದು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಪಾಲಕರು ತಮ್ಮ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ.
(ಬೇಸಿಗೆಯ ಬಿಸಿಲು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮಕ್ಕಳ ಆರೋಗ್ಯದ ದೃಷ್ಠಿಯಿಂದ ಬಿಸಿಲಿನ ತಾಪಕ್ಕೆ ಮನೆಯಲ್ಲೇ ಇರಲು ಹೇಳುತ್ತಿದ್ದೇವೆ. ಪರೀಕ್ಷೆಗಳೆಲ್ಲ ಮುಗಿದಿರುವುದರಿಂದ ಇಂತ ಸಂದರ್ಭದಲ್ಲಿ ಶಾಲೆಗೆ ಕಳಿಸದಿರುವುದೇ ಲೇಸು. - ಹಣಮಂತ ಪೂಜೇರಿ, ಪಾಲಕರು)
(ಪರೀಕ್ಷೆಗಳು ಮುಗಿದ ನಂತರ ಮಕ್ಕಳು ಶಾಲೆಗೆ ಬರುತ್ತಿಲ್ಲ. ಮನೆಗೆ ಫೋನ್ ಮಾಡಿ ಕೇಳಿದರೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಮಕ್ಕಳ ಪೋಷಕರು ಹೇಳುತ್ತಿದ್ದಾರೆ. - ಶಿಕ್ಷಕರು )