ಶೈಕ್ಷಣಿಕ ವರ್ಷ ಕಳೆದರೂ ಮಕ್ಕಳಿಗಿಲ್ಲ ಸಮವಸ್ತ್ರ

ಲೋಕದರ್ಶನ ವರದಿ

ಕೊಪ್ಪಳ 08: ಪ್ರಸಕ್ತ ಸಾಲಿನ ಎರಡನೇ ಜೊತೆ ಸಮವಸ್ತ್ರವನ್ನು ಸರಕಾರಿ ಶಾಲೆಯ ಮಕ್ಕಳಿಗೆ ಈ ವರೆಗೂ ಕೂಡಾ ಇಲಾಖೆಯಿಂದ ನೀಡದಿರುವದು, ಸರಕಾರಿ ಶಾಲೆಗಳಿಗೆ ರಾಜ್ಯ ಸರಕಾರವು ಮಾಡುತ್ತಿರುವ ಮಲತಾಯಿ ಧೋರಣೆ ಎಂದು ಆದರ್ಶ ಇಂಗ್ಲೀಷ್ ಮಾಧ್ಯಮ ಶಾಲೆ ಟಣಕನಕಲ್ ಎಸ್.ಡಿ.ಎಂ.ಸಿ ಸದಸ್ಯ ಜಗದೀಶ ಹೆಬ್ಬಳಿ ಇಲಾಖೆಯ ನಡೆಯನ್ನು ಖಂಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಶಿಸ್ತಿನ ಪಾಠವನ್ನು ಹೇಳಿ ಕೊಡಬೇಕಾದ ಶಿಕ್ಷಣ ಇಲಾಖೆ, ಆರಂಭದ ಮೆಟ್ಟಿಲಾದ ಸಮವಸ್ತ್ರದ ಶಿಸ್ತು ಕಾಪಾಡುವಲ್ಲಿ ಇಲಾಖೆ ಮತ್ತು ಸರಕಾರವು ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ಜೂನ್ ತಿಂಗಳಿನಲ್ಲಿ ಕೇವಲ ಒಂದು ಜೊತೆ ಸಮವಸ್ತ್ರವನ್ನು ನೀಡಿರುವ ಸರಕಾರ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರು ಈ ವರೆಗೂ ಎರಡನೇ ಜೊತೆ ಸಮವಸ್ತ್ರವನ್ನು ನೀಡಿಲ್ಲ, ಈ ರೀತಿಯ ಸರಕಾರ ಮತ್ತು ಇಲಾಖೆ ಮಾಡುವ ವೈಫಲ್ಯಗಳು ಮಕ್ಕಳ ಮನಸ್ಸಿನಲ್ಲಿ ಬೇರೆ ಬೇರೆ ಭಾವನೆಗಳು ಹುಟ್ಟುವಂತೆ ಮಾಡುತ್ತವೇ ಎಂದು ತಿಳಿಸಿದರು. ಮಂಜುನಾಥ ಮೇಟಿ, ಸುರೇಶ ಮಂಗಳೂರು, ವಿರುಪಾಕ್ಷಿ ಮುದ್ದಾಬಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.