ತಂಬಾಕು ನಿಯಂತ್ರಣ ಕಾಯಿದೆಯ ಸಮರ್ಪಕ ಅನುಷ್ಠಾನಕ್ಕೆ ಮಕ್ಕಳ ಮನವಿ

ಬೆಂಗಳೂರು,  ಡಿ.17   ತಂಬಾಕು ಕೊಲ್ಲುತ್ತದೆ, ತಂಬಾಕು ನಿಷೇಧ ಅಗತ್ಯ, ತಂಬಾಕುವಿನಿಂದ  ನಮ್ಮನ್ನು ರಕ್ಷಿಸಿ, ಇವು ನಿನ್ನೆ ನಡೆದ ತಂಬಾಕು ಮುಕ್ತ ಮಕ್ಕಳು, ಅಭಿಯಾನದಲ್ಲಿ  ಚಿತ್ರ ಹಾಗಿ ಬಿತ್ತಿ ಪತ್ರಗಳಲ್ಲಿ ಕಂಡು ಬಂದ ಘೋಷವಾಕ್ಯಗಳು. ಕರ್ನಾಟಕ ತಂಬಾಕು ಮುಕ್ತ  ಒಕ್ಕೂಟ, ಸೆಂಟ್. ಜೋಸೆಫ್ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಲಾ  ಮಕ್ಕಳಿಗೆ ತಂಬಾಕು ಕುರಿತ ಚಿತ್ರಕಲಾ ಸ್ಫರ್ಧೆಯ ಮೂಲಕ ಅರಿವು ಮೂಡಿಸುವ ಕಾರ್ಯವನ್ನು  ಮಾಡಲಾಯಿತು. ಶಾಲಾ ಮಕ್ಕಳು ತಂಬಾಕು ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ  ಸರ್ಕಾರಕ್ಕೆ ತಾಕೀತು ಮಾಡಿದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮುಖ್ಯ  ಅತಿಥಿಯಾಗಿ ಆಗಮಿಸಿ ಮಾತನಾಡಿದ ಶಾಂತಿನಗರದ ಶಾಸಕ ಹಾರಿಸ್ ಎನ್. ಎ., ನಮ್ಮ ಸರ್ಕಾರವು ಕೋಟ್ಪಾ ಕಾಯಿದೆಯ ಅನುಷ್ಠಾನದಲ್ಲಿ ಸಾಕಷ್ಟು ಕ್ರಮಗಳನ್ನು  ತೆಗೆದುಕೊಂಡಿತ್ತು. ಪೊಲೀಸ್, ಆರೋಗ್ಯ, ಪಾಲಿಕೆಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು  ನಮ್ಮ ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳ ಸುತ್ತ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವನ್ನು  ಅನುಷ್ಠಾನಕ್ಕೆ ತರಲಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ತಂಬಾಕು ನಿಯಂತ್ರಣ ಕುರಿತ  ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ನಾವು ಅಧಿಕಾರದಲ್ಲಿ  ಇಲ್ಲದಿದ್ದರೂ, ನಿಷ್ಪಕ್ಷಪಾತವಾಗಿ ಈ ಪಿಡುಗನ್ನು ತೊಲಗಿಸಲು ಸರ್ಕಾರಕ್ಕೆ ಮನವಿ  ಮಾಡುತ್ತೇವೆ. ಇಂದಿನ ಮಕ್ಕಳ ಆರೋಗ್ಯ ಹಿತ ಕಾಪಾಡುವಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಈ  ಕಾರ್ಯಕ್ರಮದ ಮೂಲಕ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಶಾಲೆಯ ವಿಧ್ಯಾರ್ಥಿನಿಯೊಬ್ಬರು, ಶಾಲಾ ಕಾಲೇಜುಗಳ ಸುತ್ತ ತಂಬಾಕು  ಉತ್ಪನ್ನಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಸಿನಿಮಾಗಳಲ್ಲಿ ತಂಬಾಕು ಉತ್ಪನ್ನ  ಬಳಕೆಯನ್ನು ವೈಭವೀಕರಿಸಲಾಗುತ್ತಿದೆ ಹಾಗು ಇವುಗಳನ್ನು ಉತ್ಪನ್ನಗಳ ಜಾಹೀರಾತಿಗಾಗಿ  ಉಪಯೋಗಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳ ಸಂಪೂರ್ಣ ನಿಷೇಧ ಅಥವಾ ತಂಬಾಕು ಉತ್ಪನ್ನಗಳ  ಮಾರಾಟಕ್ಕೆ ಪರವಾನಗಿಯನ್ನು ಕಡ್ಡಾಯವಾಗಿಸುವುದು ಸರ್ಕಾರವು ಇದರಲ್ಲಿ ಯಾವುದಾದರೊಂದು  ಕ್ರಮವನ್ನು ಜರುಗಿಸುವ ಮೂಲಕ ಮಕ್ಕಳ ಮೇಲೆ ಇರುವ ಕಾಳಜಿಯನ್ನು ನಿರೂಪಿಸಬೇಕಾಗಿದೆ. ಇದೇ  ವಿಷಯವನ್ನು ಪ್ರಸ್ತಾವಿಸಿ ಸರ್ಕಾರಕ್ಕೆ ಈ ವೇದಿಕೆಯ ಮೂಲಕ ಮನವಿಯನ್ನು  ಸಲ್ಲಿಸಲಾಗುತ್ತಿದೆ, ಎಂದು ತಿಳಿಸಿದರು.  ಕರ್ನಾಟಕ ತಂಬಾಕು ಮುಕ್ತ ಒಕ್ಕೂಟದ ಕಾರ್ಯದರ್ಶಿ ಚಂದರ್ ಎಸ್.  ಜೆ, ರಾಜ್ಯದಲ್ಲಿ 8 ಲಕ್ಷಕ್ಕೂ ಅಧಿಕ ತಂಬಾಕು ಉತ್ಪನ್ನ ಬಳಕೆದಾರರಿದ್ದಾರೆ, ಇವರಲ್ಲಿ  60,000 ಕ್ಕೂ ಹೆಚ್ಚು ಬಳಕೆದಾರರು 15 ವರ್ಷಕ್ಕಿಂದ ಕಡಿಮೆ ವಯೋಮಿತಿಯವರು ಇದ್ದಾರೆ.  ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ತಂಬಾಕು ಬಳಕೆಯಿಂದ ದೂರವಿಟ್ಟರೆ ಅವರು ಮುಂದೆ ಬೇರೆ  ಮಾದಕ ವಸ್ತು ಹಾಗು ತಂಬಾಕು ಉತ್ಪನ್ನಗಳ ದಾಸರಾಗುವುದನ್ನು ತಡೆಗಟ್ಟಬಹುದಾಗಿದೆ. ಪ್ರತೀ  ವರ್ಷ 10 ಲಕ್ಷ ಜನರು ತಂಬಾಕು ಉತ್ಪನ್ನಗಳಿಂದ ಸಾವಿಗೀಡಾಗುತ್ತಿದ್ದಾರೆ, ತಂಬಾಕು  ಕಂಪನಿಗಳು ಈ ಗ್ರಾಹಕರ ಜಾಗವನ್ನು ಮಕ್ಕಳನ್ನು ಆಕರ್ಶಿಸುವ ಮೂಲಕ ತುಂಬಿಸುತ್ತಿದ್ದಾರೆ. ಈ  ಪರಿಣಾಮವನ್ನು ಮನಗೊಂಡು ಮಕ್ಕಳು ತಂಬಾಕು ವಿರುದ್ದ ಸಮರವನ್ನು ತಾವಾಗಿಯೇ ಸಾರಿದ್ದು,  ಸರ್ಕಾರಕ್ಕೆ ಕ್ರಮ ತೆಗೆದುಗೊಳ್ಳುವಂತೆ ಕೋರಲಾಗುತ್ತಿದೆ, ಎಂದು ತಿಳಿಸಿದರು.