ಕೊವಿದ್‍ ಲಾಕ್‌ಡೌನ್ ಕುರಿತು ಪ್ರಧಾನಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಸಭೆ; ಅವಧಿ ವಿಸ್ತರಣೆಗೆ ಮುಖ್ಯಮಂತ್ರಿಗಳ ಇಂಗಿತ

ನವದೆಹಲಿ, ಏಪ್ರಿಲ್ 11,ದೇಶದಲ್ಲಿ ಕರೋನವೈರಸ್ ಪ್ರಕರಣಗಳ ತೀವ್ರ ಏರಿಕೆ ತಡೆಯಲು ಲಾಕ್‌ಡೌನ್ ಅವಧಿಯನ್ನು ವಿಸ್ತರಿಸುವ ಇಂಗಿತವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಏಪ್ರಿಲ್ 30 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ವಿಡಿಯೋ ಕಾನ್ಫರೆನ್ಸ್‍ ನಲ್ಲಿ ಮಾತನಾಡಿದ ಪ್ರಧಾನಿ, ‘ನಾನು ದಿನದ 24 ತಾಸು ಲಭ್ಯವಿರುತ್ತೇನೆ. ಯಾವುದೇ ಮುಖ್ಯಮಂತ್ರಿ ನನ್ನೊಂದಿಗೆ ಮಾತನಾಡಬಹುದು. ಕೊವಿದ್‍್-19 ಕುರಿತ ಸಲಹೆಗಳನ್ನು ಯಾವಾಗ ಬೇಕಾದರೂ ನೀಡಬಹುದು.

ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕು.’ ಎಂದು ಹೇಳಿದ್ದಾರೆ. ದೇಶಾದ್ಯಂತ 21 ದಿನಗಳ ಲಾಕ್‍ಡೌನ್‍ ಅವಧಿ ಮಂಗಳವಾರವರೆಗೆ ಇದ್ದು, ಆನಂತರವೂ ಈ ಅವಧಿಯನ್ನು 15 ದಿನಗಳವರೆಗೆ ಪಂಜಾಬ್ ಮತ್ತು ಒಡಿಶಾ ಸರ್ಕಾರಗಳು ವಿಸ್ತರಿಸಿವೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‍ ಗೆಹ್ಲೋಟ್‍ ಸೇರಿದಂತೆ ಅನೇಕ ಮುಖ್ಯಮಂತ್ರಿಗಳು ಸಹ ಇನ್ನೂ 15 ದಿನ ಲಾಕ್‍ಡೌನ್‍ ವಿಸ್ತರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಮುಖಗವಸು ಧರಿಸಿದ್ದರು.ದೇಶದಲ್ಲಿ ಕೊರೊನವೈರಸ್‍ನ ದೃಢಪಟ್ಟ ಪ್ರಕರಣಗಳ ಸಂಖ್ಯೆ 7,000 ದಾಟಿದ ನಡುವೆಯೇ ಮಹತ್ವದ ಈ ಸಭೆ ನಡೆದಿದೆ.ಮಾರಕ ವೈರಸ್‌ನಿಂದ ದೇಶಾದ್ಯಂತ ಈವರೆಗೆ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ .ಈ ಹಿಂದೆ ವಿರೋಧ ಪಕ್ಷಗಳ ಮುಖಂಡರೊಂದಿಗಿನ ಸಭೆಯಲ್ಲಿ ಪ್ರಧಾನಿ, ಸದ್ಯದ ಪರಿಸ್ಥಿತಿ ಸಾಮಾಜಿಕ ತುರ್ತು ಪರಿಸ್ಥಿತಿಗೆ ಹೋಲುವಂತಿದೆ ಎಂದು ಹೇಳಿದ್ದರು. ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವ ಪ್ರಯತ್ನಗಳಲ್ಲಿ ಭಾಗಿಯಾಗಿರುವ ಎಲ್ಲಾ ಸಂಬಂಧಿತ ಸಂಸ್ಥೆಗಳು ಮತ್ತು ಭಾಗೀದಾರರಿಂದ ಕೇಂದ್ರ ಸರ್ಕಾರವು ಈ ವಿಷಯದ ಬಗ್ಗೆ ಅಭಿಪ್ರಾಯಗಳನ್ನು ಕೋರಿದೆ.