ಬೆಂಗಳೂರು, ಜೂ.26, ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವಿಟ್ ಮಾಡಿ, ಮಾದಕ ವಸ್ತುಗಳ ವ್ಯಸನ ಕೇವಲ ವ್ಯಕ್ತಿತ್ವಕ್ಕಷ್ಟೇ ಅಲ್ಲದೇ ಇಡೀ ಸಮಾಜದ ಸ್ವಾಸ್ಥ್ಯಕ್ಕೆ ದೊಡ್ಡ ಬೆದರಿಕೆಯಾಗಿದೆ. ಕೌಟುಂಬಿಕ ಬದುಕನ್ನೇ ನಾಶ ಮಾಡುವ ಮಾದಕ ವಸ್ತುಗಳ ವ್ಯಸನ ಮತ್ತು ಸಾಗಾಣಿಕೆಯ ದುಷ್ಪರಿಣಾಮ ಕುರಿತು ಅರಿವು ಮೂಡಿಸೋಣ ಎಂದು ಕರೆ ನೀಡಿದ್ದಾರೆ.ಮಾದಕ ವಸ್ತುಗಳ ವ್ಯಸನದ ಪಿಡುಗು ಮತ್ತು ಸಾಗಾಟದಂತಹ ಅಕ್ರಮಗಳಿಂದ ಸಮಾಜವನ್ನು ಮುಕ್ತಗೊಳಿಸಲು ಶ್ರಮಿಸೋಣ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಮಾದಕ ವಸ್ತುಗಳ ವ್ಯಸನದಿಂದ ವ್ಯಕ್ತಿತ್ವವಷ್ಟೇ ಅಲ್ಲದೆ ಇಡೀ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಸಮಾಜವನ್ನು ಮಾದಕ ವಸ್ತುಗಳ ವ್ಯಸನ ಮತ್ತು ಸಾಗಾಟದ ಪಿಡುಗುಗಳಿಂದ ಮುಕ್ತಗೊಳಿಸಲು ಕೈಜೋಡಿಸೋಣ ಎಂದು ಮನವಿ ಮಾಡಿದ್ದಾರೆ.