ಮೊಬೈಲ್‌ ಫೀವರ್ ಕ್ಲಿನಿಕ್‌ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ

ಬೆಂಗಳೂರು, ಮೇ 11,ಮೊಬೈಲ್‌ ಫೀವರ್ ಕ್ಲಿನಿಕ್‌ಗೆ ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.ಬಳಿಕ ಮಾತನಾಡಿದ ಯಡಿಯೂರಪ್ಪ, ಮೊಬೈಲ್ ಫೀವರ್ ಕ್ಲಿನಿಕ್‌ ಉಪಕ್ರಮವನ್ನು ಹೌಸ್‌ಜಾಯಿ ಸಿಇಒ ಸಂಜಿತ್ ಗೌರವ್, ಕೆಎಸ್‌ಆರ್‌ಟಿಸಿ, ಸಂಸದ ತೇಜಸ್ವಿ ಸೂರ್ಯ ಮತ್ತಿತರ ಪಾಲುದಾರರೊಂದಿಗೆ ಆರಂಭಿಸಲಾಗಿದೆ. ವೈರಸ್ ವಿರುದ್ಧ ಹೋರಾಟದ ಅಂಗವಾಗಿ ಇದನ್ನು ಪ್ರಾರಂಭಿಸಲಾಗಿದೆ. ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಬಸ್‌ನಲ್ಲಿ ಹಾಸಿಗೆಗಳು, ಸಮಾಲೋಚನೆ ಕೊಠಡಿ, ಸರಿಯಾಗಿ ನೈರ್ಮಲ್ಯ ಕಾಪಾಡಲು ಎರಡು ವಲಯಗಳಾಗಿ ವಿಂಗಡಿಸಲಾಗಿದೆ. ಬೆಂಗಳೂರಿನ ನಾಲ್ಕೂ ವಿಭಾಗಗಳಲ್ಲೂ ಈ ಮೊಬೈಲ್ ಫೀವರ್ ಕ್ಲಿನಿಕ್ ಸಂಚರಿಸಲಿದೆ. ಒಟ್ಟು ನಾಲ್ಕು ತಂಡಗಳು ಕಾರ್ಯಾಚರಿಸಲಿವೆ. ಪ್ರತಿ ತಂಡದಲ್ಲಿ ವೈದ್ಯರು, 3 ದಾದಿಯರು ಮತ್ತು ಒಬ್ಬ ಲ್ಯಾಬ್‌ ಟೆಕ್ನಿಷಿಯನ್‌ನನ್ನು  ಒಳಗೊಂಡಿರಲಿದೆ. ಹಲವಾರು ಸ್ವಯಂ ಸೇವಕರು ಇದರ ನಿರ್ವಹಣೆ ಮಾಡಲಿದ್ದಾರೆ ಎಂದರು.
ತಂಡವು ಕೆಂಪು ವಲಯದಿಂದ ತನ್ನ ಕೆಲಸವನ್ನು ಆರಂಭಿಸಲಿದೆ. ಈ ವಲಯಗಳಿಂದ ಗರಿಷ್ಠ ಸಂಖ್ಯೆ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲಿದ್ದು, ಪಾಸಿಟಿವ್ ರೋಗ ಲಕ್ಷಣ ಇರುವವರನ್ನು ಪ್ರತ್ಯೇಕಿಸುತ್ತದೆ.ಎಲ್ಲಾ ನಿವಾಸಿಗಳಿಗೆ ಉಚಿತ ಗ್ಲುಕೋಸ್ ರಕ್ತದೊತ್ತಡ ಪರೀಕ್ಷೆ, ಕೋವಿಡ್ ರೋಗಲಕ್ಷಣಗಳ ಸಮಾಲೋಚನೆ ನಡೆಸಲಾಗುತ್ತದೆ. 3700 ರೂ.ದರದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ರೋಗ ಲಕ್ಷಣ ಇರುವವರ ಮಾಹಿತಿಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ಸಂಪರ್ಕ ತಡೆಯಲ್ಲಿ ಅವರನ್ನು ಇರಿಸಲಾಗುತ್ತದೆ ಎಂದರು. ಈಗಾಗಲೇ ಮೈಸೂರು, ಮಂಡ್ಯ, ಹುಬ್ಬಳ್ಳಿ, ಮಂಗಳೂರಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದೆ. ಕೆಎಸ್‌ಆರ್‌ಟಿಸಿ ಹಳೆಯ ಬಸ್‌ಗಳನ್ನು ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಲಾಗಿದೆ. ಅನಾರೋಗ್ಯ ಕಂಡುಬಂದರೆ ಮೊಬೈಲ್‌ ಫೀವರ್ ಕ್ಲಿನಿಕ್ ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಇಂದು ಮಧ್ಯಾಹ್ನ ಪ್ರಧಾನಿಯವರೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಯಲಿದೆ. ನಮ್ಮ ರಾಜ್ಯದ ನಿಲುವಿನ ಬಗ್ಗೆ ಅಲ್ಲಿ ಪ್ರಸ್ತಾಪಿಸುತ್ತೇನೆ. ರಾಜ್ಯದ ಪ್ಯಾಕೇಜ್‌ ಬಗ್ಗೆಯೂ ಅಲ್ಲಿ ಸ್ಪಷ್ಟವಾಗಿ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್‌ನ ಸಹಯೋಗದಿಂದ ಆರಂಭಿಸಿರುವ ಮೊಬೈಲ್ ಕ್ಲಿನಿಕ್‌ ಅನ್ನು ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ. ನವೋದ್ಯಮವೊಂದರ ಸಹಕಾರದಲ್ಲಿ ಸಂಸದರ ಕಚೇರಿ ಇದನ್ನು ಆರಂಭಿಸಿದೆ. ಒಟ್ಟು ಐದು ಬಸ್‌ಗಳು ಬೆಂಗಳೂರಿನ ಹಲವಾರು ಕಡೆ ತೆರಳಿ ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಿದೆ. ಬೆಂಗಳೂರಿನ ಎಲ್ಲಾ ಠಾಣೆಗಳ ಪೊಲೀಸರ ಪರೀಕ್ಷೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ ನಲ್ಲಿರುವವರಿಗೂ ನಿಗದಿತ ದರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್.ಅಶೋಕ್‌ ಮತ್ತಿತರು ಉಪಸ್ಥಿತರಿದ್ದರು.