ನವದೆಹಲಿ, ಆ 22 ಐಎನ್ಎಕ್ಸ್ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಮಧ್ಯರಾತ್ರಿ ಸಿಬಿಐನಿಂದ ಬಂಧಿತರಾಗಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಬಿಗಿ ಭದ್ರತೆಯ ನಡುವೆ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕರೆದೊಯ್ಯಲಾಗುತ್ತಿದೆ
ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಸಿಬಿಐ ಕೇಂದ್ರ ಕಚೇರಿ ಹಾಗೂ ಸಿಬಿಐ ನ್ಯಾಯಾಲಯದ ಆವರಣದಲ್ಲಿ ಜಲಫಿರಂಗಿ ವ್ಯವಸ್ಥೆ, ಹೆಚ್ಚುವರಿ ಬ್ಯಾರಿಕೇಡ್ ನಿರ್ಮಾಣದೊಂದಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ
ಗುರುವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಚಿದಂಬರಂ ಅವರ ಕಾನೂನು ತಂಡ ಮತ್ತು ಕುಟುಂಬ ಸದಸ್ಯರು ನ್ಯಾಯಾಲಯದ ಬಳಿ ಹಾಜರಿರುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ
ಬುಧವಾರ ಮಧ್ಯರಾತ್ರಿಯ ದೆಹಲಿಯ ಜೋರ್ ಬಾಗ್ ನಿವಾಸದ ಬಳಿ ಚಿದಂಬರಂ ಅವರನ್ನು ಬಂಧಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರನ್ನು ತಡೆಯಲು ಯತ್ನಿಸಿದರು. ಐಎನ್ಎಕ್ಸ್ ಪ್ರಕರಣದಲ್ಲಿ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮನೆಗೆ ತೆರಳಿದ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಹಿಂಬಾಲಿಸಿ, ವಶಕ್ಕೆ ತೆಗೆದುಕೊಂಡರು.
ನ್ಯಾಯಾಲಯವೊಂದು ಬಂಧನಕ್ಕೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಚಿದಂಬರಂ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.