ಬೆಂಗಳೂರು, ಆ 22 ಅಂದು ಅಮಿತ್ ಷಾ ಅವರನ್ನು ಬಂಧಿಸಿದ್ದ ಕಾರಣಕ್ಕಾಗಿಯೇ ಇಂದು ಚಿದಂಬರಂ ಅವರ ಬಂಧನವಾಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿ.ಚಿದಂಬರಂ ಯುಪಿಎ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಸಂದರ್ಭದಲ್ಲಿ ಗುಜರಾತ್ ನ ಗೃಹಸಚಿವರಾಗಿದ್ದ ಅಮಿತ್ ಷಾ ಅವರನ್ನು ಸೋಹ್ರಾಬುದ್ಧೀನ್ ಶೇಖ್ ಎನ್ ಕೌಂಟರ್ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು. ಅಮಿತ್ ಷಾ ಈಗ ಕೇಂದ್ರದಲ್ಲಿ ಗೃಹಸಚಿವರಾಗಿದ್ದಾರೆ. ಹೀಗಾಗಿ ಸಿಬಿಐ ಚಿದಂಬರಂ ಅವರನ್ನು ಬಂಧಿಸಿದೆ ಎಂದು ಹೇಳಲಾಗುತ್ತಿದೆ ಎಂದರು. ಐಎನ್ಎಕ್ಸ್ ಮೀಡಿಯಾ ಹಗರಣ ಹಳೆಯ ಪ್ರಕರಣ. ಈ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರಕರಣ ಹಾಗೂ ತಂದೆಯ ಬಂಧನದ ಕುರಿತು ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಬುಧವಾರ ಮಾತನಾಡಿರುವುದನ್ನು ಕೇಳಿದ್ದೇನೆ ಅಷ್ಟೆ. ಹಳೆಯ ಪ್ರಕರಣ ಈಗ ಏಕೆ ಈ ಹಂತಕ್ಕೆ ಹೋಗಿದೆಯೋ, ಇದು ಮುಂದೆ ಯಾವ ರೀತಿಯ ತಾರ್ಕಿಕ ಅಂತ್ಯ ಕಾಣುತ್ತದೆಯೋ ಗೊತ್ತಿಲ್ಲ ಎಂದರು.
ಐಎನ್ಎಕ್ಸ್ ಮೀಡಿಯ ಪ್ರಕರಣದ ವಿಚಾರಣೆಯಲ್ಲಿ ಚಿದಂಬರಂ ಸರಿಯಾಗಿ ಸಹಕಾರಿ ಕೊಟ್ಟಿದ್ದಾರೆಯೋ ಇಲ್ಲವೋ ಎಂಬುದು ತಮಗೆ ಗೊತ್ತಿಲ್ಲ. ಆದರೆ ಇಂತಹ ಘಟನೆ ದೇಶದಲ್ಲಿ ಹಿಂದೆಂದೂ ನಡೆದಿಲ್ಲ. ಚಿದಂಬರಂ ಅವರ ಬಂಧನಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗುತ್ತಿಲ್ಲ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ತಮ್ಮ ಪುತ್ರ ಕುಮಾರಸ್ವಾಮಿ ಅವರ ಮೇಲೆ ಕಣ್ಣಿಟ್ಟಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.