ನವದೆಹಲಿ, ನ 30- ದೇಶದ ಆರ್ಥಿಕ ಪರಿಸ್ಥಿತಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಿನೇ ದಿನೇ ಕುಸಿಯುತ್ತಿದ್ದು, ಸರಿಪಡಿಸಲಾಗದಷ್ಟು ಅಧೋಗತಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಬುದ್ಧಿವಂತ ಜಾರ್ಖಂಡ್ ಮತದಾರರು ಬಿಜೆಪಿಯನ್ನು ತಿರಸ್ಕರಿಸಬೇಕೆಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಜನರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಅವರ ಪರವಾಗಿ ಸರಣಿ ಟ್ವೀಟ್ ಮಾಡಲಾಗಿದ್ದು, ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಮೋದಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು, ಜಾರ್ಖಂಡ್ ಜನರಿಗೆ ಇದಕ್ಕಿಂತ ಉತ್ತಮ ಅವಕಾಶ ದೊರೆಯುವುದಿಲ್ಲ ಎಂದಿದ್ದಾರೆ.
ಕಳೆದ ಐದಾರು ವರ್ಷಗಳಿಂದಲೂ ಜಿಡಿಪಿ ಕುಸಿಯುತ್ತಲೇ ಬಂದಿದೆ. ಈಗ ಎರಡನೇ ತ್ರೈಮಾಸಿಕ ಅವಧಿಯಲ್ಲೂ ಒಟ್ಟು ಆಂತರಿಕ ಉತ್ಪನ್ನ ಶೇ 4.5 ಕ್ಕೆ ಕುಸಿದಿದೆ. ಮುಂದೆಯೂ ಕೂಡ ಆರ್ಥಿಕ ಪರಿಸ್ಥಿತಿಯ ಚೇತರಿಕೆಯ ಲಕ್ಷಣ ಕಾಣುತ್ತಿಲ್ಲ. ಆದರೂ ಸರ್ಕಾರ ಎಲ್ಲವೂ ಸರಿ ಇದೆ ಎಂದು ಹೇಳುತ್ತಿದೆ.
ಸರ್ಕಾರ ಕೈಗೊಂಡ ಕ್ರಮಗಳು ಯಾವುದೇ ಫಲಕೊಡುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಜನರು ಜಾಗರೂಕರಾಗಿ ಬಿಜೆಪಿಯನ್ನು ತಿರಸ್ಕರಿಸಲು ಗಟ್ಟಿ ಮನಸ್ಸು ಮಾಡಬೇಕು ಎಂದು ಚಿದಂಬರಂ ಟ್ವೀಟ್ ಮೂಲಕ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಜಾರ್ಖಂಡ್ ವಿಧಾನಸಭೆಗೆ ಶನಿವಾರದಿಂದ ಐದು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.