ಡಿಸೆಂಬರ್ ಮಾಹೆಯಲ್ಲಿ ರಾಸಾಯನಿಕ ವಿಪತ್ತು ತಡೆ ಮಾಸಾಚರಣೆ: ಸುರೇಶ್ ಕುಮಾರ್

Suresh Kumar

ಬೆಂಗಳೂರು, ನ.29-ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ ಕುರಿತಂತೆ ಜಾಗೃತಿ ಮೂಡಿಸಲು ಕಾರ್ಖಾನೆಗಳು, ಬಾಯ್ಲರ್ ಮತ್ತು ಕೈಗಾರಿಕಾ ಸುರಕ್ಷತೆ ಇಲಾಖೆ ಆಶ್ರಯದಲ್ಲಿ 2019ರ ಡಿಸೆಂಬರ್ ಮಾಹೆಯನ್ನು 'ರಾಸಾಯನಿಕ ವಿಪತ್ತು ತಡೆ ಮಾಸ'ವನ್ನಾಗಿ ಆಚರಿಸಲಾಗುವುದು ಎಂದು  ಕಾರ್ಮಿಕ ಸಚಿವ ಎಸ್.  ಸುರೇಶ್ ಕುಮಾರ್ ತಿಳಿಸಿದ್ದಾರೆ. 

1984ರ ಭೂಪಾಲ್ ಅನಿಲ ದುರಂತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರತಿ ವರ್ಷ ಡಿ.4 ರಂದು ರಾಸಾಯನಿಕ ವಿಪತ್ತು ತಡೆ ದಿನವನ್ನಾಗಿ ಆಚರಿಸುತ್ತಿದೆ. ಹಾಗೆಯೇ ರಾಜ್ಯದಲ್ಲಿ  ರಾಸಾಯನಿಕ ವಿಪತ್ತು ತಡೆ ಮಾಸವನ್ನಾಗಿ ಆಚರಿಸಲಾಗುವುದು.  ಇದರ ಅಂಗವಾಗಿ ವಿಶೇಷ ವಿಚಾರಸಂಕಿರಣಗಳು, ಕಾರ್ಯಾಗಾರಗಳನ್ನು ಏರ್ಪಡಿಸುವ ಜತೆಗೆ ಸುರಕ್ಷತೆಯ ಅಣಕು ಪ್ರದರ್ಶನಗಳನ್ನು ಸಹ ಆಯೋಜಿಸಲಾಗಿದೆ. ರಾಜ್ಯದ ವಿವಿಧೆಡೆ ಜಾಗೃತಿ ಮೂಡಿಸಲು ಒತ್ತು ನೀಡಲಾಗುವುದು ಎಂದರು. 

ಸುದ್ದಿಗೋಷ್ಠಿಯಲ್ಲ ಮಾತನಾಡಿದ ಅವರು, ಕೈಗಾರಿಕೆಗಳಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಗಮನ ಹರಿಸಲಾಗುವುದು. ಕರ್ತವ್ಯ ನಿರತ  ಸ್ಥಳದಲ್ಲಿ ತುರ್ತು ಸೇವಾ ಯೋಜನೆಯ ಪರಿಕಲ್ಪನೆ ಕೈಗಾರಿಕಾ ಸುರಕ್ಷತೆ ವಿಷಯಗಳು, ಸವಾಲುಗಳು, ಅಣಕು ಪ್ರದರ್ಶನ ಮತ್ತು ವಿಚಾರ ಸಂಕಿರಣ ಫೌಂಡ್ರಿಗಳಲ್ಲಿ ಸುರಕ್ಷತೆ ಕುರಿತು ಅಣಕು ಪ್ರದರ್ಶನ ಏರ್ಪಡಿಸಲಾಗುವುದು. ಸಿಮೆಂಟ್ ಕಾರ್ಖಾನೆಗಳು, ರಾಸಾಯನಿಕ ಕಾರ್ಖಾನೆಗಳಲ್ಲಿ ಸುರಕ್ಷತೆ ಹಾಗೂ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳಲ್ಲಿ ಕಾರ್ಮಿಕರ ಹಿತ ಕಾಪಾಡುವ ಕುರಿತು ವಿಚಾರ ಸಂಕಿರಣಗಳು ಮತ್ತು ಅಣುಕು ಪ್ರದರ್ಶನಗಳನ್ನು ಆಯೋಜಿಸಲಾಗುವುದು ಎಂದರು. 

ನೆಲಮಂಗಲ, ಕೋಲಾರ, ಬೆಂಗಳೂರಿನ ಬೊಮ್ಮಸಂದ್ರ, ಬಿಡದಿ, ದೇವನಹಳ್ಳಿ, ಬೆಳಗಾವಿ, ತುಮಕೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ಬೀದರ್ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸುರಕ್ಷತೆ ಕುರಿತು ಅರಿವು ಮೂಡಿಸಲಾಗುವುದು ಸಚಿವ ಸುರೇಶ್ ಕುಮಾರ್ ಹೇಳಿದರು