ಲೋಕದರ್ಶನ ವರದಿ
ಶಿರಹಟ್ಟಿ: ಪ್ರತಿಯೊಬ್ಬರೂ ಮಾನಸಿಕ ನೆಮ್ಮದಿಗಾಗಿ ಆಧ್ಯಾತ್ಮಿಕ ಚಿಂತನೆಗಳಿಗೆ ಒಳಗಾಗಬೇಕು. ಜೊತೆಗೆ ಪ್ರತಿಯೊಬ್ಬರೂ ಸಹಿತ ದಾನ, ಧರ್ಮಗಳನ್ನು ಅಚರಿಸುವುದರಿಂದ ಭಗವಂತನನ್ನು ಸಾಕ್ಷತ್ಕಾರ ಮಾಡಿಕೊಳ್ಳಲು ಸಾಧ್ಯ. ಭಾರತ ದೇಶದಲ್ಲಿ ವಿವಿಧ ಸಂಸ್ಕೃತಿ, ಆಚಾರ, ವಿಚಾರ, ಜಾತಿ, ಮತ, ಪಂಥಗಳು ಇದ್ದರೂ ಸಹ ಸರ್ವರೂ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸುತ್ತಿರುವುದು ಭಗವಂತನ ಕೃಪೆಯಿಂದ ಎಂದು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಜಿಗಳು ಹೇಳಿದರು.
ತಾಲೂಕಿನ ಚಿಕ್ಕಸವಣೂರ ಗ್ರಾಮದಲ್ಲಿ ಶನಿವಾರ ನಡೆದ ಉಗ್ರನರಸಿಂಹೇಶ್ವರ ದೇವಸ್ಥಾನದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಮಾನಸಿಕ ನೆಮ್ಮದಿ ಸಿಗಬೇಕಾದರೆ ದೇವರ ನಾಮ ಸ್ಮರಣೆ ಮಾಡಬೇಕು. ಅಲ್ಲದೇ ಪ್ರತಿದಿನ ದೇವರನ್ನು ಭಕ್ತಿಯಿಂದ ಪೂಜಿಸಿ ಕೈಮುಗಿದರೆ ಭಗವಂತ ಭಕ್ತನಿಗೆ ಆಯುಷ್ಯ, ಆರೋಗ್ಯ, ನೆಮ್ಮದಿ ಕರುಣಿಸಿ, ಸಿರಿ ಸಂಪತ್ತನ್ನು ಕಲ್ಪಿಸುತ್ತಾನೆ. ಆದ್ದರಿಂದ ಸಾರ್ವಜನಿಕರು ಉಗ್ರನರಸಿಂಹೇಶ್ವರನ ಕೃಪೆಗೆ ಪಾತ್ರರಾಗಿ ಭಕ್ತಿ ಭಾವದಿಂದ ಬೇಡಿಕೊಂಡು ವ್ಯಾಪಾರ, ವ್ಯವಹಾರ ಹಾಗೂ ಇನ್ನೀತರ ಕೆಲಸದಲ್ಲಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.
ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಶ್ರೀಗಳು ಮಾತನಾಡಿ, ನರಸಿಂಹೇಶ್ವರನು ದುಷ್ಟ ಶಕ್ತಿಗಳನ್ನು ಸಂಹಾರ ಮಾಡಿ, ತನ್ನನ್ನು ಸ್ಮರಿಸುವ ಭಕ್ತರನ್ನು ಸದಾ ರಕ್ಷಣೆ ಮಾಡುವ ಶಕ್ತಿದಾತನಾಗಿದ್ದಾನೆ. ಅಲ್ಲದೇ ಭಕ್ತರ ಕಷ್ಟಗಳನ್ನು ಸದಾ ಪರಿಹರಿಸುತ್ತಾ, ಸರ್ವ ರೂಪದಲ್ಲೂ ಸಹಾಯ ಮಾಡುವುದರ ಮೂಲಕ ನಂಬಿದ ಭಕ್ತಸಾಗರವನ್ನು ಸದಾ ಕಾಯುವ ಸೃಷ್ಠಿಕರ್ತನಾಗಿದ್ದಾನೆ. ಇಂತಹ ಭಗವಂತನನ್ನು ಗ್ರಾಮದ ಜನತೆ ಪ್ರತಿ ನಿತ್ಯ ಆರಾಧಿಸಿ, ನಾಮ ಸ್ಮರಣೆ ಮಾಡುವುದರ ಮೂಲಕ ನೆಮ್ಮದಿ ಜೀವನ ನಡೆಸಬೇಕು ಎಂದು ಹೇಳಿದರು.
ನಂತರ, ಲಕ್ಷ್ಮೇಶ್ವರದ ಸಿದ್ದೇಶ್ವರ ಸ್ವಾಮಿಜಿಗಳು, ಅಗಡಿಯ ಗುರುಸಿದ್ದೇಶ್ವರ ಸ್ವಾಮಿಜಿಗಳು, ಸೊರಟೂರಿನ ಅನ್ನದಾನೇಶ್ವರ ಶಾಖಾ ಮಠದ ಶಿವಯೊಗೇಶ್ವರ ಸ್ವಾಮಿಜಿಗಳು ಮಾತನಾಡಿ, ದೇಶದಲ್ಲಿ ರೈತರ ಮತ್ತು ಸೈನಿಕರ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ಇವರ ಪರಿಸ್ಥಿತಿ ಇಂದು ಹೇಳತೀರದಾಗಿದೆ. ರೈತರ ಗೋಳ ನೋಡದಾಗಿದೆ. ಸರಕಾರ ಇವರತ್ತ ಗಮನ ಹರಿಸಬೇಕಾದುದು ಅವಶ್ಯವಿದೆ. ಪ್ರಸ್ತುತ ದಿನಗಳಲ್ಲಿ ರೈತರು ಬಹಳಷ್ಟು ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಸರಕಾರ ರೈತರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕಲ್ಪಿಸಿ, ರೈತರ ಆರ್ಥಿಕ ಅಭಿವೃದ್ಧಿಗೆ ನೀರಾವರಿ ಯೋಜನೆಯಂತಹ ಮಹತ್ವದ ಯೋಜನೆ ಕೈಗೊಳ್ಳಬೇಕು. ಮನುಷ್ಯ ಇಂದು ಮೊಬೈಲ, ಸಿಗರೇಟ, ಮದ್ಯಪಾನದ ಇಲ್ಲದೇ ಬದುಕುಬಹುದು ಆದರೆ ಹೊಟ್ಟೆಗೆ ಅನ್ನವಿಲ್ಲದೇ ಬದುಕಲು ಸಾಧ್ಯವಿಲ್ಲ. ಆದರೂ ಸಹ ರೈತ ಬಡವನಾಗಿದ್ದಾನೆ, ಮೊಬೈಲ್, ಸಿಗರೇಟ, ಮದ್ಯಪಾನ ಕಂಪನಿಯ ಮಾಲಿಕರು ಶ್ರೀಮಂತರಾಗುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯೋಧರಾದ ನಿಂಗಪ್ಪ ಶಿಗ್ಲಿ ಹಾಗೂ ನೇತ್ರಾ ಗುಡ್ಡದವರ ಅವರನ್ನು ಸನ್ಮಾನಿಸಲಾಯಿತು. ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಎಸ್.ಎನ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ಮಾಜಿ ಜಿಪಂ ಅಧ್ಯಕ್ಷ ಶಿವಪ್ರಕಾಶ ಮಹಾಜನಶಟ್ಟರ, ಜಿಪಂ ಸದಸ್ಯ ರೇಖಾ ಅಳವಂಡಿ, ಚಂದ್ರಣ್ಣ ಮುಂಡವಾಡ, ಎನ್.ಎನ್. ಗೋಕಾವಿ, ಬಿ.ಎಂ. ಯರಕದ, ವೀರೇಶ ಹಿರೇಮಠ, ಶಂಕರ ಶ್ಯಾಗೋಟಿ, ಗೋವಿಂದಪ್ಪ ಶ್ಯಾಗೋಟಿ, ಮಲ್ಲಪ್ಪ ನಾವಿ, ಕೃಷ್ಣಪ್ಪ ಗುಡ್ಡದವರ, ಬಸವನಗೌಡ ಪಾಟೀಲ, ಮಲ್ಲಪ್ಪ ಗೋಕಾವಿ, ತಿರಕಪ್ಪ ಗೋಕಾವಿ, ಸೋಮರೆಡ್ಡಿ ಗೊಡಚಳ್ಳಿ ಸೇರಿದಂತೆ ಗ್ರಾಮದ ಸಮಸ್ತ ಜನತೆ ಪಾಲ್ಗೊಂಡಿದ್ದರು.