ಬಾಗಲಕೋಟೆ: ನಗರ ಸೇರಿದಂತೆ ವಿದ್ಯಾಗಿರಿ ವಿವಿಧ ಬಡಾವಣೆಗಳಿಗೆ ಕಾಲ್ನಡಿಗೆಯಲ್ಲಿ ಸಂಚಾರ ಮಾಡಿದ ಶಾಸಕ ವೀರಣ್ಣ ಚರಂತಿಮಠ ಸಾರ್ವಜನಿಕರ ಅಹವಾಲು ಆಲಿಸಿದರು.
ಶಾಸಕ ವೀರಣ್ಣ ಚರಂತಿಮಠವರು ವಾರ್ಡಗಳಲ್ಲಿ ಪ್ರವೇಶ ಮಾಡುತ್ತಿದ್ದಂತೆ ಸಾಹೇಬರ ರಸ್ತೆ ಸರಿಯಾಗಿಲ್ಲ ಡಾಂಬರೀಕರಣ ಮಾಡಿಕೊಡಿ,ಗಟಾರು ಸರಿಯಾಗಿ ಕ್ಲೀನ್ ಮಾಡಲು ಅಧಿಕಾರಿಗಳಿಗೆ ತಿಳಿಸಿ,ಸಮರ್ಪಕವಾಗಿ ಕುಡಿಯುವ ನೀರು ಬರುವಂತೆ ಮಾಡಿಕೊಡಿ ಎಂದು ಸಾರ್ವಜನಿಕರು ಶಾಸಕರಿಗೆ ಸಮಸ್ಯೆಗಳನ್ನು ತಿಳಿಸಿದರು.
ಹಲವಾರು ಸಮಸ್ಯೆಗಳನ್ನು ಹೊತ್ತುಕೊಂಡು ಕುಳಿತಿದ್ದ ಸಾರ್ವಜನಿಕರ ಬಳಿಯೇ ಚರಂತಿಮಠರು ತೆರಳಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಂದಾದರು. ಶಾಸಕರು ಕಾಲ್ನಡಿಗೆಯಲ್ಲಿಯೇ ಸುಮಾರು ಎರಡ್ಮೂರು ಘಂಟೆಗಳ ಕಾಲ ಸಂಚಾರ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ಸಾರ್ವಜನಿಕರು ಹೇಳುವ ಸಮಸ್ಯೆಗಳನ್ನು ಶಾಂತಚಿತ್ತರಾಗಿ ಆಲಿಸುವ ಜತೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮಾಡುವಂತೆ ಸೂಚಿಸಿದರು.
ವಿದ್ಯಾಗಿರಿಯ ಪೋಸ್ಟ್ಲ್ ಕಾಲೋನಿ ಮತ್ತು ಎನ್ಜಿಓ ಕಾಲೋನಿಯ ಕೆಲವೊಂದು ಮನೆಗಳನ್ನು ಕಟ್ಟಿಕೊಳ್ಳಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದು, ಬ್ಯಾಂಕಿನಿಂದ ಸಾಲವನ್ನು ಪಡೆದುಕೊಂಡು ಮನೆ ಕಟ್ಟಲು ಉತಾರ ಸಮಸ್ಯೆಯಾಗುತ್ತಿದ್ದು ಇದನ್ನು ಸರಿಪಡಿಸಿಕೊಡಬೇಕು ಎಂದು ಕಾಲೋನಿ ನಿವಾಸಿಗಳು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.ತಕ್ಷಣವೇ ಈ ನಿವಾಸಿಗಳ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಅವರಿಗೆ ಮನೆಕಟ್ಟಲು ಅನುಕೂಲ ಮಾಡಿಕೊಡಬೇಕು ಎಂದು ನಗರಸಭೆ ಪೌರಾಯುಕ್ತ ಇನ್ನಿತರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪೋಸ್ಟ್ಲ್ ಕಾಲೋನಿ, ಗೌಡ್ರ ಕಾಲೋನಿ, ಬೆಂಡಿಗೇರಿ ,ಸೂಳಿಭಾವಿ ಕಾಲೋನಿಗಳಿಗೆ ಶಾಸಕರು ಭೇಟಿ ನೀಡಿದರು. ಈ ಕಾಲೋನಿಗಳಲ್ಲಿ ರಸ್ತೆ ಅಗಲೀಕರಣ,ಯುಜಿಡಿ ಮತ್ತು ಗಟಾರು,ರಸ್ತೆ ಡಾಂಬರೀಕರಣ ಕಾಮಗಾರಿ, ವಿದ್ಯುತ್ ಮತ್ತು ಸಮರ್ಪಕ ಕುಡಿಯುವ ನೀರು ಪೂರೈಕೆ ಕುರಿತು ಗಮನ ಹರಿಸಬೇಕು, ಸ್ವಚ್ಛತಾ ಕೆಲಸವನ್ನು ಆರಂಭಿಸಬೇಕು ಎಂದು ನಗರಸಭೆ ಪೌರಾಯುಕ್ತ ಮುನಿಸ್ವಾಮಿಗೆ ಸೂಚಿಸಿದರು. ನಗರಸಭೆ ಸದಸ್ಯ ಶೋಭಾ ರಾವ್, ದ್ಯಾಮವ್ವ ಸೂಳಿಕೇರಿ, ಮುತ್ತು ಸೂಳಿಕೇರಿ, ಶರದ್ ಪಾಟೀಲ್, ಅನಿಲ ಅಕ್ಕಿಮರಡಿ, ಉಮೇಶ್ ಹಂಚಿನಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.