ಮಹಾಲಿಂಗಪುರ 09: ಚನ್ನಬಸು ಹುರಕಡ್ಲಿಯವರು ಧರ್ಮಮಾರ್ಗದಲ್ಲಿ ನಿರಂತರ 16 ವರ್ಷಗಳಿಂದ ಮಾಡುತ್ತಿರುವ ಸಮಾಜ ಸೇವಾ ಕಾರ್ಯ ಮಾದರಿ ಎಂದು ಧಾರವಾಡದ ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಹೇಳಿದರು.
ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಸಿ.ಎಂ.ಹುರಕಡ್ಲಿ ಫೌಂಡೇಷನ್ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಈವಂಗೆ(ನೀಡುವವನಿಗೆ) ಮತ್ತು ದೇವಂಗೆ ವ್ಯತ್ಯಾಸವಿಲ್ಲ, ಪ್ರತಿವರ್ಷ ಅಂಗವಿಕಲರಿಗೆ ಉಚಿತ ಕೃತಕ ಕೈಕಾಲು ಜೋಡಣೆ, ಬಗಲು ಬಡಿಗೆ, ಕನ್ನಡಕ ವಿತರಣೆ, ಕಿವಿ ತಪಾಸಣೆ ಮತ್ತು ಶ್ರವಣಯಂತ್ರ್ರ ವಿತರಣೆ, ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ದಂತ ತಪಾಸಣೆ ಮತ್ತು ಉಚಿತ ಹಲ್ಲಿನ ಸೆಟ್ ವಿತರಣೆ, ಉಚಿತ ಕ್ಯಾನ್ಸರ್ ಓಷಧಿ, ಸಂಧಿವಾತ, ತಲೆ-ಸೊಂಟ, ಬೆನ್ನು, ಕೈಕಾಲು ನೋವುಗಳಿಗೆ ಮಸಾಜ್ ಈ ರೀತಿ ಹತ್ತು ಹಲವಾರು ಸೇವೆಗಳನ್ನು ಬಡವರಿಗಾಗಿ ಮಾಡುತ್ತಿರುವ ಚನ್ನಬಸು ಹುರಕಡ್ಲಿಯವರು ಬಡವರ ಪಾಲಿನ ಭಗವಂತ, ಅವರ ನಿಸ್ವಾರ್ಥ, ನಿರಪೇಕ್ಷ ಸೇವೆಯಿಂದ ಮಾತ್ರ ನಾವಿಲ್ಲಿಗೆ ಬಂದಿರುವುದು ಎಂದರು.
ಜಮಖಂಡಿಯ ಉಪನ್ಯಾಸಕ ಡಾ.ಯಶವಂತ ಕೊಕ್ಕನವರ ಮಾತನಾಡಿ, ಒಂದಷ್ಟು ಗಳಿಕೆಯನ್ನು ಸಮಾಜಕ್ಕೆ ನೀಡಿ, ಅವರ ಖುಷಿ ಕಂಡು ತಾವೂ ಖುಷಿ ಪಡುವ ಚನ್ನಬಸು ಹುರಕಡ್ಲಿಯವರ ಸೇವಾ ಕಾರ್ಯ ಈ ಸ್ವಾರ್ಥ ಸಮಾಜಕ್ಕೆ ಮಾದರಿ ಎಂದರು.
ಆದ್ಯಕ್ಷತೆ ವಹಿಸಿದ್ದ ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಶ್ರೀಗಳು ಮಾತನಾಡಿ, ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳಿಸುವ ಈ ಕಾಲದಲ್ಲಿ ಅವರ ಸ್ಮರಣಾರ್ಥ ಮಾಡುತ್ತಿರುವ ಸೇವಾ ಕಾರ್ಯ ಮಾದರಿ, ಸಾತ್ವಿಕ ಗುಣವುಳ್ಳ ಚನ್ನಬಸು ಹುರಕಡ್ಲಿ ಬಡವರ ಪಾಲಿನ ಸ್ವಾತಿ ಮುತ್ತು ಎಂದರು.
ಫೌಂಡೇಷನ್ ಸಂಸ್ಥಾಪಕ ಚನ್ನಬಸು ಹುರಕಡ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೈಮೇಲೆ ರಕ್ತದಾನ ಜಾಗೃತಿಯ ಸಂದೇಶ ಬರೆದುಕೊಂಡು ರಾಜ್ಯ ಸುತ್ತುವ ದಾವಣಗೆರೆಯ ಮಹಡಿಮನೆ ಶಿವಕುಮಾರ ತಮ್ಮ 100ನೇ ರಕ್ತದಾನವನ್ನು ಮಾಡಿ ರಕ್ತದಾನದ ಮಹತ್ವ ಸಾರಿದರು.
ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ರಾಜೇಶ ಭಾವಿಕಟ್ಟಿ, ಡಾ.ಅಜಿತ ಕನಕರಡ್ಡಿ, ಡಾ.ಮಂಜುನಾಥ ಚನ್ನಾಳ, ರಾಘವೇಂದ್ರ ನವಲಗುಂದ, ಪ್ರಭಯ ಮೇಟಿ, ಡಾ.ಎಂ.ಎಚ್.ನಾಯಕ, ಪುರಸಭಾ ಸದಸ್ಯೆ ಸವಿತಾ ಹುರಕಡ್ಲಿ ವೇದಿಕೆ ಮೇಲಿದ್ದರು.
ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಮುಖಂಡರಾದ ಬಸವರಾಜ ಘಟ್ನಟ್ಟಿ, ಅಶೋಕ ಅಂಗಡಿ, ಹನಮಂತ ಶಿರೋಳ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಬಸಪ್ಪ ಕೊಪ್ಪದ, ಗುರುಪಾದಯ್ಯ ಚಟ್ಟಿಮಠ, ಈಶ್ವರ ಮುರಗೋಡ, ಚಂದ್ರಶೇಖರ ಗೊಂದಿ, ಸಾಗರ ಮಠದ, ರಾಜು ಬೆಳಗಾಂವಕರ, ಪ್ರಭು ಬೆಳಗಲಿ, ಮಹಾಲಿಂಗಪ್ಪ ಕಂಠಿ, ವೆಂಕಣ್ಣ ಬಿರಾದಾರ, ಬಸವರಾಜ ಗಿರಿಸಾಗರ, ಕುಮಾರ ಮನವಾಡೆ ಇತರರಿದ್ದರು.