ನವದೆಹಲಿ, ಆ 9 ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ತವರಿನಲ್ಲಿ ನಡೆಯಲಿದ್ದು, ಮೊದಲನೇ ಪಂದ್ಯ ನಿಗದಿತ ಸ್ಥಳದಲ್ಲಿ ನಡೆಯಲಿದೆ. ಆದರೆ, ಎರಡು ಮತ್ತು ಮೂರನೇ ಪಂದ್ಯಗಳನ್ನು ಕ್ರಮವಾಗಿ ಪುಣೆ ಮತ್ತು ರಾಂಚಿಗೆ ಸ್ಥಳಾಂತರ ಮಾಡಲಾಗಿದೆ.
ಭಾರತ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ, ಮೂರು ಪಂದ್ಯಗಳ ಟಿ20 ಮತ್ತು ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಆರಂಭದ ವೇಳಾಪಟ್ಟಿಯ ಪ್ರಕಾರ ಎರಡನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಅ. 10-14ರವರೆಗೆ ಮತ್ತು 3ನೇ ಟೆಸ್ಟ್ ಪುಣೆಯಲ್ಲಿ ಅ. 19 ರಿಂದ 23ರ ವರೆಗೆ ನಡೆಯಬೇಕಿತ್ತು.ಆದರೆ, ಇದೀಗ ಎರಡು ಟೆಸ್ಟ್ ಪಂದ್ಯಗಳ ಸ್ಥಳ ಬದಲಾವಣೆ ಮಾಡಲಾಗಿದ್ದು, ಇದಕ್ಕೆ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐನಿಂದ ಒಪ್ಪಿಗೆ ಲಭಿಸಿದೆ ಎನ್ನಲಾಗಿದೆ.
ವರದಿಯ ಪ್ರಕಾರ ಸುಪ್ರೀಂ ಕೋರ್ಟ್ ನೇಮಿತ ಕ್ರಿಕೆಟ್ ಆಡಳಿತ ಮಂಡಳಿ(ಸಿಒಎ), ಟೆಸ್ಟ್ ತಾಣ ಬದಲಾಯಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಎರಡನೇ ಟೆಸ್ಟ್ ಪಂದ್ಯದ ದಿನಾಂಕದಂದೆ 'ದುರ್ಗಾ ಪೂಜೆ' ಇರುವ ಹಿನ್ನೆಲೆಯಲ್ಲಿ ತಾಣ ಬದಲಾಯಿಸುವಂತೆ ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಬಿಸಿಸಿಐಯಲ್ಲಿ ವಿನಂತಿಸಿಕೊಂಡಿತ್ತು.
ಭಾರತ ಪ್ರವಾಸ ಕೈಗೊಳ್ಳುವ ದಕ್ಷಿಣ ಆಫ್ರಿಕಾ, ಸೆ. 15 ರಿಂದ ಅ. 23ರವರೆಗೆ ಟಿ-20 ಸರಣಿ ಹಾಗೂ ಮೊದಲ ಟೆಸ್ಟ್ ಪಂದ್ಯ ಅ. 2 ರಿಂದ 6 ರವರೆಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆಯಲಿದೆ.