ಚಂದ್ರಯಾನ -2 ಯಶಸ್ವಿ ಉಡಾವಣೆ

ಶ್ರೀಹರಿಕೋಟಾ 22: ಅದು ಅತ್ಯಂತ ಪ್ರತಿಷ್ಠೆಯ ಹಾಗೂ ಸವಾಲಿನ ಕ್ಷಣವಾಗಿತ್ತು.  ಚಂದ್ರನ ದಕ್ಷಿಣ ಧ್ರುವಕ್ಕೆ ಪ್ರಯಾಣ ಬೆಳಸಲಿರುವ ಚಂದ್ರಯಾನ -2 ಉಪಗ್ರಹವನ್ನು ಹೊತ್ತು ಭಾರತದ ಅತಿ ಭಾರವಾದ ಉಡಾವಣಾ ನೌಕೆ ಜಿಎಸ್ ಎಲ್ ವಿ-ಎಂಕೆ 3-ಎಂ 1 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸೋಮವಾರ ಮಧ್ಯಾಹ್ನ 2.43ಕ್ಕೆ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು. 

ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷೆಯ, ಚಂದ್ರನ ದಕ್ಷಿಣ ಧ್ರವದಲ್ಲಿ ಮೃದುವಾಗಿ ಕೆಳಗಿಳಿಯುವ ಗುರಿ ಹೊಂದಿರುವ 3,450 ಕೆಜಿ ತೂಕದ ಚಂದ್ರಯಾನ -2 ಉಪಗ್ರಹವನ್ನು ಹೊತ್ತ ನೌಕೆ ಯಶಸ್ವಿಯಾಗಿ ಉಡಾವಣೆಗೊಂಡಿತು.  

20 ಗಂಟೆಗಳ ಕೌಂಟ್ ಡೌನ್ ನಂತರ, 43.43 ಮೀಟರ್ ಉದ್ದದ ರಾಕೆಟ್,  ಕೇಸರಿ ಹೊಗೆಯನ್ನು ಉಗುಳುತ್ತ ರಭಸದಿಂದ ನಭದತ್ತ ಚಿಮ್ಮಿತು. ಇದರ ರಭಸಕ್ಕೆ ಕೆಲ ಕಾಲ ಅಲ್ಲಿನ ಭೂಮಿಯಲ್ಲಿ ಕಂಪನ ಕಂಡುಬಂತು. ದೇಶದ ಜನರು, ವಿಜ್ಞಾನಿಗಳ ಲಕ್ಷಾಂತರ ಕನಸನ್ನು ಹೊತ್ತು ಉಪಗ್ರಹ ಉಡಾವಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ನೆರೆದಿದ್ದ ವಿಜ್ಞಾನಿಗಳು, ಗಣ್ಯರು ಚಪ್ಪಾಳೆ ತಟ್ಟಿ ಸಂತಸ ಹಂಚಿಕೊಂಡರು.