ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನೂತನ ಚಿತ್ರದ ಪೋಸ್ಟರ್ ಬಿಡುಗಡೆ

ಬೆಂಗಳೂರು, ಜುಲೈ 13:  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸಲಿರುವ ನೂತನ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.  

 ಇನ್ನೂ ಹೆಸರಿಡದ (ಪ್ರೊಡಕ್ಷನ್ ನಂ 1) ಚಿತ್ರದ ಪೋಸ್ಟರ್ ಅನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ಜುಲೈ 12ರಂದು ತಮ್ಮ ಜನ್ಮದಿನದಂದು ಬಿಡುಗಡೆಗೊಳಿಸಿದ್ದಾರೆ. 

 ತೆಲುಗಿನ ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನರಳ ಶ್ರೀನಿವಾಸ ರೆಡ್ಡಿ ಅವರು ಬಾಲಶ್ರೀರಾಮ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  ವಿಜಯಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

 ಎಮೋಷನಲ್ ಹಾಗೂ ಸೇನಾ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರಾಮ್ ದುಲಿಪುಡಿ ನಿರ್ದೇಶಿಸುತ್ತಿದ್ದಾರೆ. 

 ತೆಲುಗಿನಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಇವರಿಗೆ, ಕನ್ನಡದಲ್ಲಿ ಇದು ಚೊಚ್ಚಲ ಚಿತ್ರ.

 ಕೊರೋನ ಲಾಕ್ ಡೌನ್ ಮುಗಿದು ಸರ್ಕಾರದ ಅನುಮತಿ ಸಿಕ್ಕ ನಂತರ ಚಿತ್ರೀಕರಣ ಆರಂಭವಾಗಲಿದೆ. ಚಿಕ್ಕಮಗಳೂರು, ಕಾಶ್ಮೀರ ಹಾಗೂ ಅಮೆರಿಕದಲ್ಲಿ ಚಿತ್ರೀಕರಣ ನಡೆಸುವ ಕುರಿತು ಚಿತ್ರತಂಡದಿಂದ ಮಾಹಿತಿ ದೊರೆತಿದೆ.

 ಶಿವರಾಜಕುಮಾರ್ ಜತೆ ನಾಯಕಿಯಾಗಿ ಖ್ಯಾತ ನಟಿಯೊಬ್ಬರು ಅಭಿನಯಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಮಾಹಿತಿ ಸದ್ಯದಲ್ಲೇ ತಿಳಿದುಬರಲಿದೆ. 

 ಶ್ರೀಚರಣ್ ಪಕಾಲ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ರವಿಕುಮಾರ್ ಸನಾ ಅವರ ಛಾಯಾಗ್ರಹಣದಲ್ಲಿ ಚಿತ್ರದ ಸುಂದರ ಸನ್ನಿವೇಶಗಳು ಸೆರೆಯಾಗಲಿದೆ.