ಕೇಂದ್ರದಿಂದ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ : ಎಸ್‌.ಗುರುಲಿಂಗನಗೌಡ ಸ್ವಾಗತ

ಕೇಂದ್ರದಿಂದ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ : ಎಸ್‌.ಗುರುಲಿಂಗನಗೌಡ ಸ್ವಾಗತ Centre announces support price for 14 crops: S. Gurulingana Gowda welcomes

ಬಳ್ಳಾರಿ 14 : 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಕೇಂದ್ರ ಸರ್ಕಾರ ಘೋಷಿಸಿರುವ 14 ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವನ್ನು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷರಾದ ಎಸ್‌.ಗುರುಲಿಂಗನ ಗೌಡ ಹರ್ಷ ವ್ಯಕ್ತಪಡಿಸಿ ಕೇಂದ್ರದ ಕ್ರಮವನ್ನು ಸ್ವಾಗತಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ರೈತರ ಬದುಕನ್ನು ಸುಧಾರಿಸಲು ಕ್ರಮ ಕೈಗೊಳ್ಳುತ್ತಿದೆ. ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿಸಲು ನಿರಂತರವಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. 2026-27ನೇ ಸಾಲಿನ ಮುಂಗಾರಿ ಬೆಳೆಗಳಿಗೆ ಎಂ.ಎಸ್‌.ಪಿ. ದರ ಹೆಚ್ಚಳ ಮಾಡಿರುವುದು ರೈತರ ಶ್ರಮಕ್ಕೆ ನೀಡಿರುವ ಗೌರವವಾಗಿದೆ ಎಂದು ಅವರು ತಿಳಿಸಿದ್ದಾರೆ.  

ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಎಂ.ಎಸ್‌.ಪಿ. ದರಗಳಿಂದ ಭತ್ತ, ಜೋಳ, ರಾಗಿ, ಸಜ್ಜೆ, ಮೆಕ್ಕೆಜೋಳ, ತೊಗರಿಬೇಳೆ, ಉದ್ದು, ಹೆಸರಬೇಳೆ, ನೆಲಗಡಲೆ, ಸೂರ್ಯಕಾಂತಿ, ಸೋಯಾಬಿನ್‌. ಎಳ್ಳು ಹಾಗೂ ಹತ್ತಿ ಬೆಳೆಗಾರರಿಗೆ ನೇರ ಲಾಭವಾಗಲಿದೆ. ವಿಶೇಷವಾಗಿ ತೊಗರಿಬೇಳೆ, ಹೆಸರು ಬೇಳೆ, ಉದ್ದು ಹಾಗೂ ಎಣ್ಣೆ ಬೀಜಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎಂ.ಎಸ್‌.ಪಿ. ಹೆಚ್ಚಳ ಘೋಷಿಸಿರುವುದು ರೈತರಲ್ಲಿ ಹೊಸ ವಿಶ್ವಾಸ ಮೂಡಿಸಿದೆ.ಕಳೆದ ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ರೈತರ ಉತ್ಪಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ಪರೀಶೀಲಿಸಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಮೂಲಕ ಭದ್ರ ಆದಾಯ ಒದಗಿಸುವ ಕೆಲಸ ಮಾಡುತ್ತಿದೆ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸ್ಪಷ್ಟ ಸಂಕಲ್ಪವಾಗಿದೆ.  

ಇದೇ ಕಾರಣಕ್ಕೆ ಎಂ.ಎಸ್‌.ಪಿ. ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ಕೃಷಿ ಉತ್ಪನ್ನಗಳ ಖರೀದಿ ವ್ಯವಸ್ಥೆಯನ್ನೂ ವಿಸ್ತರಿಸಲಾಗುತ್ತಿದೆ. ಭತ್ತದ ಎಂ.ಎಸ್‌.ಪಿ. ಅನ್ನು ರೂ. 2441ಕ್ಕೆ ಹಾಗೂ ಗ್ರೇಡ್ ’ಎ’ ಭತ್ತದ ಎಂ.ಎಸ್‌.ಪಿ. ಅನ್ನು ರೂ. 2461ಕ್ಕೆ ಹೆಚ್ಚಿಸಿರುವುದು ಅಕ್ಕಿ ಬೆಳೆಗಾರರಿಗೆ ನೆರವಾಗಲಿದೆ. ರಾಗಿ ಬೆಲೆಯನ್ನು ರೂ. 5205ಕ್ಕೆ ಏರಿಸಿರುವುದು ಕರ್ನಾಟಕದ ರೈತರಿಗೆ ವಿಶೇಷ ಸಂತಸದ ವಿಚಾರವಾಗಿದೆ. ಜೋಳ, ಸಜ್ಜೆ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಹೆಚ್ಚಳ ನೀಡಿರುವುದು ಬರ ಪ್ರದೇಶದ ರೈತರಿಗೆ ಸಹಾಯಕವಾಗಲಿದೆ. ಪಲ್ಸ್‌ ಹಾಗೂ ಎಣ್ಣೆ ಬೀಜ ಉತ್ಪಾದನೆಯನ್ನು ಉತ್ತೇಜಿಸಲು ತೊಗರಿಬೇಳೆ ರೂ. 8450, ಹೆಸರಬೇಳೆ ರೂ. 8780, ಉದ್ದು ರೂ. 8200, ಸೋಯಾಬಿನ್ ರೂ. 5708, ಸೂರ್ಯಕಾಂತಿ ರೂ.8343 ಹಾಗೂ ಎಳ್ಳು ರೂ. 10346 ಎಂ.ಎಸ್‌.ಪಿ. ನಿಗದಿಪಡಿಸಿರುವುದು ದೇಶದ ಕೃಷಿ ಆತ್ಮನಿರ್ಭರತೆಗೆ ಸಹಕಾರಿ ಆಗಲಿದೆ. ಹತ್ತಿ ಬೆಳೆಗಾರರ ಹಿತದೃಷ್ಟಿಯಿಂದ ಮಧ್ಯಮ ಎಳೆಯ ಹತ್ತಿಗೆ ರೂ. 8267 ಹಾಗೂ ಉದ್ದ ಎಳೆಯ ಹತ್ತಿಗೆ ರೂ. 8667 ಒಖಕ ಘೋಷಿಸಿರುವುದು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ.ಕೇಂದ್ರ ಸರ್ಕಾರ ಈಗಾಗಲೇ ಪಿಎಂ-ಕಿಸಾನ್ ಸಮ್ಮಾನ್ ನಿಧಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ, ಸೂಕ್ಷ್ಮ ನೀರಾವರಿ ಯೋಜನೆಗಳು, ರಸಗೊಬ್ಬರ ಸಹಾಯಧನ ಸೇರಿದಂತೆ ಅನೇಕ ಯೋಜನೆಗಳ ಮೂಲಕ ರೈತರ ಅಭಿವೃದ್ಧಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ.  

ಎಂ.ಎಸ್‌.ಪಿ. ಹೆಚ್ಚಳದ ಈ ನಿರ್ಧಾರ ರೈತರ ಆರ್ಥಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಲಿದೆ. ರೈತರ ಬೆವರು ವ್ಯರ್ಥವಾಗಬಾರದು. ಕೃಷಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಬೇಕು ಹಾಗೂ ಗ್ರಾಮೀಣ ಆರ್ಥಿಕತೆ ಬಲವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಈ ಐತಿಹಾಸಿಕ ನಿರ್ಧಾರವನ್ನು ಅಭಿನಂದಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇಶದ ಅನ್ನದಾತರ ಕಲ್ಯಾಣವೇ ಮೋದಿ ಸರ್ಕಾರದ ಮೊದಲ ಆದ್ಯತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದೂ ಎಸ್‌.ಗುರುಲಿಂಗನಗೌಡ ಅವರು ತಿಳಿಸಿದ್ದಾರೆ.